ಉಡುಪಿ: ಅವತ್ತು ಸಿಎಂ ಕರಾವಳಿಯ ಜನರಿಗೆ ಬುದ್ಧಿ ಇಲ್ಲ ಅಂದ್ರು. ಒಂದೂವರೆ ತಿಂಗಳಲ್ಲೇ ಕರಾವಳಿಯವರು ಬುದ್ಧಿವಂತರು ಅಂತಿದ್ದಾರೆ. ಪ್ರಮೋದ್ ಮಧ್ವರಾಜ್ ಜೆಡಿಎಸ್ ಸೇರಿ ಒಂದು ಉಪಕಾರ ಆಯ್ತು, ಕರಾವಳಿಯವರು ಬುದ್ಧಿವಂತರು ಅಂತಾ ಕುಮಾರಸ್ವಾಮಿಗೆ ಗೊತ್ತಾಯ್ತು ಎಂದು ಹೇಳುವ ಮೂಲಕ ಬಿಜೆಪಿ ಶಾಸಕ ರಘುಪತಿ ಭಟ್ ಲೇವಡಿ ಮಾಡಿದ್ರು.
ಕರಾವಳಿಯನ್ನು ಸಾಧ್ಯವಿದ್ದಷ್ಟು ನಿರ್ಲಕ್ಷ್ಯ ಮಾಡ್ತಾ ಬಂದ್ರು. ದುರ್ದೈವ ಅಂದ್ರೇ ಚುನಾವಣೆ ವೇಳೆ ಸಿಎಂ ಎಚ್ಚರವಾಗಿದ್ದಾರೆ. ಕಾರ್ಕಳದಲ್ಲಿ ಎಲ್ಲ ಜಾತಿಯ ಮುಖಂಡರ ಜೊತೆ ಸಿಎಂ ಸಭೆ ನಡೆಸಿ, ಪೊಳ್ಳು ಭರವಸೆ ಕೊಟ್ಟು ಕಳಿಸಿದ್ದಾರೆ. ಸಿಎಂಗೂ ಗೊತ್ತು ಲೋಕಸಭಾ ಫಲಿತಾಂಶದ ನಂತರ ಅವರಿಗೆ ಅಧಿಕಾರ ಇರಲ್ಲ. ಹಾಗಾಗಿ ಏನೇ ಭರವಸೆ ಕೊಟ್ರೂ ಈಡೇರಿಸಬೇಕಾಗಿಲ್ಲ. ಚುನಾವಣೆ ಫಲಿತಾಂಶ ಬಂದು 24 ಗಂಟೆಯೂ ಸಿಎಂ ಆಗಿ ಇರಲ್ಲ. ಎಲ್ಲಾ ಶಾಸಕರಿಗೂ ಗೊತ್ತು ಈ ಸರ್ಕಾರ ಬೀಳುತ್ತೆ ಅಂತಾ, ಹಾಗಾಗಿ ಏನೇ ಭರವಸೆ ಕೊಟ್ರೂ ನಂಬುವ ಹಾಗಿಲ್ಲ ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಸಿದ್ದರಾಮಯ್ಯಗೆ ಈ ಸಮ್ಮಿಶ್ರ ಸರ್ಕಾರ ಬೇಡ, ಲೋಕಸಭಾ ಚುನಾವಣೆ ಮುಗಿಯುವ ತನಕ ಕಾಯ್ತಾರೆ. ಸಿದ್ದರಾಮಯ್ಯನೇ ದೇವೇಗೌಡ, ನಿಖಿಲ್, ಪ್ರಜ್ವಲ್ನನ್ನು ಸೋಲಿಸ್ತಾರೆ ಅಂತಾ ಅವರು ಭವಿಷ್ಯ ನುಡಿದ್ರು. ಪ್ರಮೋದ್ ಮಧ್ವರಾಜ್ ಹೋದಲೆಲ್ಲಾ ನಾಪತ್ತೆಯಾದ ಮೀನುಗಾರರ ಬಗ್ಗೆ ಮಾತಾಡ್ತಾರೆ.
ಆದರೆ, ಸೌಜನ್ಯಕ್ಕೂ ಸಿಎಂ ನೊಂದ ಕುಟುಂಬಗಳನ್ನು ಭೇಟಿಯಾಗಿಲ್ಲ. ಭಾನುವಾರ ಪ್ರಮೋದ್ ಮನೆಗೆ ಹೋಗಿ ಸಿಎಂ ಊಟ ಮಾಡಿದ್ದಾರೆ. ಆದರೆ, ಅಲ್ಲೇ ಒಂದು ಕಿ.ಮೀ ದೂರ ಇರುವ ಮೀನುಗಾರರ ಮನೆಗೆ ಹೋಗಿಲ್ಲ. ಸಿಎಂಗೆ ಎಲ್ಲಾ ಕಡೆ ತನಗೆ ಹೆಲಿಕಾಪ್ಟರ್ಗೆ ಅನುಮತಿ ಕೊಡಲ್ಲ ಅಂತಾರೆ. ಆದರೆ, ನಾಪತ್ತೆಯಾದ ಮೀನುಗಾರರ ಮನೆಗೆ ಹೋಗೋಕೆ ಹೆಲಿಕಾಪ್ಟರ್ ಬೇಕಾ? ಅಂತಾ ಉಡುಪಿ ಶಾಸಕ ರಘುಪತಿ ಭಟ್ ಪ್ರಶ್ನಿಸಿದ್ದಾರೆ.