ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಸೋಮವಾರದಿಂದ ಭಕ್ತರಿಗೆ ದೇವರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ದೇವಸ್ಥಾನ ತೆರೆಯಲು ಧಾರ್ಮಿಕ ಧತ್ತಿ ಇಲಾಖೆ ನಿರ್ಧರಿಸಿದ್ದು, ಇದಕ್ಕಾಗಿ ಎಲ್ಲಾ ರೀತಿಯ ಸಿದ್ಧತೆಯನ್ನು ಸರ್ಕಾರದ ಮಾರ್ಗಸೂಚಿಯಂತೆ ದೇವಾಲಯದಲ್ಲಿ ಮಾಡಿಕೊಳ್ಳಲಾಗಿದೆ. ಭಕ್ತರು ಮಾಸ್ಕ್ ಹಾಕಿಕೊಂಡು ದೇವಸ್ಥಾನಕ್ಕೆ ಬರಬೇಕು. ದೇವಾಲಯದಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ. 60 ವರ್ಷ ಮೇಲ್ಪಟ್ಟವರಿಗೆ ದೇವಾಲಯಕ್ಕೆ ಅವಕಾಶವಿರುವುದಿಲ್ಲ. ಬರುವ 60 ವರ್ಷದೊಳಗಿನ ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಂಡು ಮೂಕಾಂಬಿಕೆಯ ದರ್ಶನ ಪಡೆಯಬೇಕಿದೆ.
ಸಾಮಾಜಿಕ ಅಂತರ ಕಾಪಾಡಲು ದೇವಾಲಯದ ಸುತ್ತಲೂ ವೈಟ್ ಮಾರ್ಕ್ ಮಾಡಲಾಗಿದೆ. ದೇವಾಲಯದಲ್ಲಿ ತೀರ್ಥ ಪ್ರಸಾದವಿರುವುದಿಲ್ಲ. ಆನ್ಲೈನ್ ಸೇವೆಗೆ ಅವಕಾಶ ಮಾಡಿಕೊಡಲಾಗಿದೆ.
ದೇವಾಲಯದ ವಸತಿ ಗೃಹ ಹಾಗೂ ಖಾಸಗಿ ವಸತಿ ಗೃಹ ತೆರೆಯದಿರಲು ನಿರ್ಧರಿಸಿದ್ದು, ಭವಿಷ್ಯದಲ್ಲಿ ಖಾಸಗಿ ವಸತಿ ಗೃಹ ತೆರೆಯಲು ಮಾಲೀಕರು ನಿರ್ಧರಿಸಿದ್ದಾರೆ. ಸಣ್ಣ ಹೋಟೆಲ್, ಗೂಡಂಗಡಿಗಳನ್ನು ಮಾತ್ರ ಬಾಗಿಲು ತೆರೆಯುವುದಾಗಿ ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.