ಉಡುಪಿ: ಜಿಲ್ಲೆಯ ಕಾಪು ಸಮೀಪದ ಅರಬ್ಬೀ ಸಮುದ್ರದಲ್ಲಿ ಎರಡು ದಿನಗಳಿಂದ ಸಿಲುಕಿದ್ದ ಕೋರಮಂಡಲ ಸಪೋರ್ಟ್ -9 ನೌಕೆಯಲ್ಲಿದ್ದ ನೌಕರರನ್ನು ನೇವಿ ಹೆಲಿಕಾಫ್ಟರ್ ಮೂಲಕ ರಕ್ಷಣೆ ಮಾಡಲಾಗಿದೆ.
ಸದ್ಯ ಎಲ್ಲಾ ಕಾರ್ಮಿಕರನ್ನು ನವಮಂಗಳೂರಿನ ಎನ್ಎಂಪಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತೌಕ್ತೆ ಚಂಡಮಾರುತ ತಂದ ಈ ಸಂಕಟಕ್ಕೆ ಭಾರತೀಯ ನೌಕಾದಳ ಸಲಾಂ ಅಂದ್ರೆ, ಇನ್ನೊಂದು ಕಡೆ ಕರಾವಳಿಯ ವಿಪತ್ತು ನಿರ್ವಹಣಾ ಸಾಮರ್ಥ್ಯ ಕಳಪೆಯಾಗಿದೆ.
ತೌಕ್ತೆ ಚಂಡಮಾರುತ ಕರಾವಳಿಯನ್ನು ಅಪ್ಪಳಿಸಿದಾಗ, ಲಾಕ್ಡೌನ್ನಲ್ಲಿದ್ದ ಜನರೆಲ್ಲ ಮನೆಯಲ್ಲಿ ಬೆಚ್ಚಗೆ ಮಲಗಿದ್ದರು. ಆದರೆ ಮಂಗಳೂರಿನ ಎಂಆರ್ಪಿಎಲ್ ನೌಕರರು ಕೆಲಸಕ್ಕೆಂದು ಸಮುದ್ರಕ್ಕಿಳಿದವರು ಟಗ್ ಒಳಗೆ ಸಿಕ್ಕಿಬಿದ್ದಿದ್ದರು. ಗಾಳಿಯ ಅಲೆಗೆ ತೇಲಿಕೊಂಡು ಬಂದು ಉಡುಪಿ ಜಿಲ್ಲೆಯ ಕಾಪು ಸಮೀಪದ ಲೈಟ್ ಹೌಸ್ ಬಳಿ ಬಂಡೆಗೆ ಸಿಲುಕಿ ಹಾಕಿಕೊಂಡಿದ್ದರು.
ತೀರ ಪ್ರದೇಶದಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿದ್ದ ಇವರನ್ನು ರಕ್ಷಿಸುವುದು ಸಾಧ್ಯವೇ ಇರಲಿಲ್ಲ. ಕೋಸ್ಟ್ ಗಾರ್ಡ್ ತಂಡ ಎಷ್ಟೇ ಪ್ರಯತ್ನಪಟ್ಟರೂ ಟಗ್ ನ ಹತ್ತಿರಕ್ಕೂ ಹೋಗಲು ಸಾಧ್ಯವಾಗಲಿಲ್ಲ. ಕರಾವಳಿ ಕಾವಲು ಪಡೆಯ ಪೊಲೀಸರಿಗೆ ಏನೂ ಮಾಡಲು ಆಗಲಿಲ್ಲ. ತಕ್ಷಣಕ್ಕೆ ಹೆಲಿಕಾಪ್ಟರ್ ವ್ಯವಸ್ಥೆ ಮಾಡಬೇಕಿತ್ತಾದರೂ, ರಾಜಕೀಯ ನಾಯಕರಿಗೆ ಇಚ್ಛಾಶಕ್ತಿ ಇರಲಿಲ್ಲ ಎಂಬ ಮಾತುಗಳು ಕೇಳಿಬಂದಿವೆ.
ಟಗ್ನಲ್ಲಿ ಸಿಲುಕಿದ್ದ 9 ಮಂದಿ ಜೀವ ಕೈಯಲ್ಲಿ ಹಿಡಿದು, ತಮ್ಮನ್ನು ರಕ್ಷಿಸಿ ರಕ್ಷಿಸಿ ಎಂದು ವಿಡಿಯೋ ಮಾಡಿ ಕಳುಹಿಸುತ್ತಿದ್ದರು. ದಡದಲ್ಲಿ ನಿಂತು ಕಾಯುತ್ತಿದ್ದ ಸಹೋದ್ಯೋಗಿಗಳು ಕಣ್ಣೀರು ಹಾಕುತ್ತಿದ್ದರು. ಭಾನುವಾರ ಸಂಜೆಯ ವೇಳೆಗೆ ಈ ಎಲ್ಲ ಬೆಳವಣಿಗೆ ರಾಜ್ಯ ಸರ್ಕಾರದ ಗಮನಕ್ಕೆ ಬಂದಿದೆ. ಹೆಲಿಕಾಪ್ಟರ್ ಬಳಸಿ ಇವರನ್ನು ರಕ್ಷಿಸುವಂತೆ ಮುಖ್ಯಮಂತ್ರಿಗಳು ಆದೇಶ ಮಾಡಿದ್ದಾರೆ. ಸಿಎಂ ಆದೇಶ ಬರುತ್ತಿದ್ದಂತೆ, ಚುರುಕಾದ ಇಂಡಿಯನ್ ಕೋಸ್ಟ್ ಗಾರ್ಡ್ನವರು ಇಂದು ಬೆಳಗ್ಗೆ ಇಂಡಿಯನ್ ನೇವಿ ಸಹಾಯ ಪಡೆದು ಅಪಾಯದಲ್ಲಿದ್ದ ಎಲ್ಲ 9 ಮಂದಿಯನ್ನು ಸುರಕ್ಷಿತವಾಗಿ ದಡ ಸೇರಿಸಿದ್ದಾರೆ.
ಇಂದು ಬೆಳಗ್ಗೆ ಕೊಚ್ಚಿಯಿಂದ ಹೊರಟ ಹೆಲಿಕಾಪ್ಟರ್, 6.30 ಕ್ಕೆ ಮಂಗಳೂರು ವಿಮಾನ ನಿಲ್ದಾಣ ತಲುಪಿತ್ತು. ಹವಾಮಾನ ವೈಪರೀತ್ಯವನ್ನು ಗಮನಿಸಿಕೊಂಡು, 10.30 ಸುಮಾರಿಗೆ ನೇರವಾಗಿ ಕಾಪು ಕಡಲ ತೀರ ತಲುಪಿತು. ಕೇವಲ 30 ನಿಮಿಷದಲ್ಲಿ ಕಾರ್ಯಾಚರಣೆ ನಡೆಸಿ ನಾಲ್ವರು ಸಿಬ್ಬಂದಿಯನ್ನು ಏರ್ ಲಿಫ್ಟ್ ಮಾಡುವ ಮೂಲಕ ರಕ್ಷಣೆ ಮಾಡಿದರೆ, ಉಳಿದ ಐವರನ್ನು ಕೋಸ್ಟ್ ಗಾರ್ಡ್ನ ಸ್ಪೀಡ್ ಬೋಟ್ ಮೂಲಕ ರಕ್ಷಣೆ ಮಾಡಲಾಯಿತು. ಸದ್ಯ ಮಂಗಳೂರು ಎನ್ಎಂಪಿಟಿಯ ಆಸ್ಪತ್ರೆಯಲ್ಲಿ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಲಾಗಿದೆ.
ಈ ನೌಕರರು ಅನುಭವಿಸಿದ ಸಂಕಟ ಪ್ರಕೃತಿಕ ವಿಕೋಪವನ್ನು ಎದುರಿಸಲು ಕರ್ನಾಟಕ ಕರಾವಳಿ ಎಷ್ಟರಮಟ್ಟಿಗೆ ಸಜ್ಜಾಗಿದೆ ಅನ್ನುವುದನ್ನು ಎತ್ತಿತೋರಿಸಿದೆ. ಅಪಾಯದಲ್ಲಿ ಸಿಲುಕಿದ್ದ ಎಲ್ಲಾ ನೌಕರರು ನುರಿತ ಈಜುಗಾರರು ಆಗಿದ್ದರೂ ಅವಘಡಗಳು ಉಂಟಾದಾಗ ತಮ್ಮನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದರ ಮಾಹಿತಿ ಹೊಂದಿದ್ದರು. ಜೊತೆಗೆ ಎರಡು ದಿನಕ್ಕೆ ಬೇಕಾದಷ್ಟು ಆಹಾರ ವಸ್ತುಗಳ ಸಂಗ್ರಹ ಇವರಲ್ಲಿತ್ತು. ಅತಿಯಾದ ಆತ್ಮವಿಶ್ವಾಸವಿದ್ದ ಈ ತಂಡ ಬದುಕಿ ಬರಲು ಸಾಧ್ಯವಾಯಿತು. ಆದರೆ ಸಾಮಾನ್ಯ ವ್ಯಕ್ತಿಗಳು ಈ ರೀತಿ ಅಪಾಯದಲ್ಲಿ ಸಿಲುಕಿದ್ದರೆ ಸರ್ಕಾರದ ನಿರ್ಲಕ್ಷ್ಯದ ನಡುವೆ ಜೀವ ಉಳಿಸಿಕೊಳ್ಳುವುದೇ ಕಷ್ಟವಾದೀತು.
ನೂರಾರು ಕಿಲೋಮೀಟರ್ ಕಡಲತೀರ ಹೊಂದಿರುವ ಕರಾವಳಿ ಜಿಲ್ಲೆಗಳಿಗೆ ಈ ಘಟನೆ ಎಚ್ಚರಿಕೆಯ ಕರೆಗಂಟೆಯಾಗಿದೆ. ಅಪಾಯಗಳು ಹೇಳಿ ಕೇಳಿ ಬರುವುದಿಲ್ಲ. ಚಂಡಮಾರುತದ ಸೂಚನೆ ಇದ್ದರೂ, ತನ್ನ ನೌಕರರು ಅಪಾಯಕ್ಕೆ ಸಿಲುಕಿಸಿದ ಎಂಆರ್ಪಿಎಲ್ ಸಂಸ್ಥೆ ನಾಗರಿಕರ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿದೆ. ಜೊತೆಗೆ ತಮ್ಮನ್ನು ರಕ್ಷಿಸಿದ ನೌಕಾ ಪಡೆಯ ತಂಡಕ್ಕೆ ಕಾರ್ಮಿಕರು ಕೃತಜ್ಞತೆ ಸಲ್ಲಿಸಿದ್ದಾರೆ.
ಓದಿ: ಟಗ್ ಬೋಟ್ ಮಾಸ್ಟರ್ ಎನ್ಎಂಪಿಟಿಗೆ ಮಾಹಿತಿ ನೀಡಿರಲಿಲ್ಲ: ಡಾ.ವೆಂಕಟರಮಣ ಅಕ್ಕರಾಜು