ಉಡುಪಿ: ಇಂಜಿನ್ ಕೆಟ್ಟು ಹೋಗಿ ಸಮುದ್ರದ ಮಧ್ಯೆ ಅಪಾಯಕ್ಕೀಡಾಗಿದ್ದ ಬೋಟ್ ಮತ್ತು ಅದರಲ್ಲಿದ್ದ 11 ಮಂದಿ ಮೀನುಗಾರರನ್ನು ಇಂಡಿಯನ್ ಕೋಸ್ಟ್ ಗಾರ್ಡ್ ಹಡಗಿನ ಮೂಲಕ ರಕ್ಷಣೆ ಮಾಡಲಾಗಿದೆ.
'ಸಾಗರ್ ಸಾಮ್ರಾಟ್' ಎನ್ನುವ ಮೀನುಗಾರಿಕಾ ಬೋಟ್ ಮಲ್ಪೆ ಬಂದರಿನಿಂದ 35 ನಾಟಿಕಲ್ ಮೈಲು ದೂರದಲ್ಲಿ ಸಮುದ್ರ ಮಧ್ಯೆ ಅಪಾಯಕ್ಕೀಡಾಗಿತ್ತು. ಹೀಗಾಗಿ ಮಂಗಳವಾರ ಸಂಜೆ ತುರ್ತು ರಕ್ಷಣೆಗೆ ಕೋರಿ ಕೋಸ್ಟ್ ಗಾರ್ಡ್ ಪಡೆಗೆ ಮನವಿ ಮಾಡಲಾಗಿತ್ತು.
ಮಂಗಳೂರಿನಿಂದ ಐಸಿಜಿ ಶಿಪ್ ರಾಜದೂತ್ ಮೂಲಕ ರಾತ್ರಿ 11 ಗಂಟೆ ಸುಮಾರಿಗೆ ಕೋಸ್ಟ್ ಗಾರ್ಡ್ ಪಡೆ ಸ್ಥಳಕ್ಕೆ ತೆರಳಿತ್ತು. ಆದರೆ ಭಾರಿ ಗಾಳಿಯ ಹೊಡೆತಕ್ಕೆ ಸಿಲುಕಿದ್ದರಿಂದ ಬೋಟ್ ಇಂಜಿನ್ ಬ್ಯಾಟರಿ ಕೆಟ್ಟಿತ್ತು. ಹೀಗಾಗಿ ಬೋಟ್ ಅಪಾಯಕ್ಕೀಡಾಗಿತ್ತು, ಇದನ್ನು ಗಮನಿಸಿ, ರಕ್ಷಣೆಗೆ ಮುಂದಾಗಿತ್ತು.
ಬುಧವಾರ ಮಧ್ಯಾಹ್ನ ಗಾಳಿಯ ರಭಸ ಕಡಿಮೆಯಾದ ಸಂದರ್ಭದಲ್ಲಿ ಮೀನುಗಾರಿಕಾ ಬೋಟನ್ನು ಮೀನುಗಾರರ ಸಹಿತ ದಡಕ್ಕೆ ಎಳೆದು ತಂದಿದ್ದು, ಮಲ್ಪೆ ಬಂದರಿನ ಬಳಿ ಮೀನುಗಾರಿಕಾ ಇಲಾಖೆಯ ವಶಕ್ಕೆ ಒಪ್ಪಿಸಿದೆ. ಮೀನುಗಾರಿಕಾ ಇಲಾಖೆಯ ಕೋರಿಕೆ ಮೇರೆಗೆ ಕೋಸ್ಟ್ ಗಾರ್ಡ್ ಪಡೆ ಅರಬ್ಬೀ ಸಮುದ್ರದಲ್ಲಿ ಗಸ್ತು ಕಾರ್ಯಾಚರಣೆ ಮುಂದುವರಿಸಿದೆ.
ಇದನ್ನೂ ಓದಿ:ರಾಜ್ಯದ ಪ್ರಮುಖ ಜಿಲ್ಲಾ ಕೇಂದ್ರಗಳಲ್ಲಿ ವಿಮಾನ ನಿಲ್ದಾಣ ಹಾಗೂ ಹೆಲಿಪ್ಯಾಡ್ ನಿರ್ಮಾಣ: ಸಚಿವ ನಿರಾಣಿ