ಉಡುಪಿ: ದೇಶಾದ್ಯಂತ ಲಾಕ್ಡೌನ್ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಒಂದು ತಿಂಗಳ ಶಾಲಾ ಶುಲ್ಕವನ್ನು ಮನ್ನಾ ಮಾಡಲು ಉಡುಪಿ ಅದಮಾರು ಮಠ ನಿರ್ಧರಿಸಿದೆ ಎಂದು ಮಠದ ಹಿರಿಯ ಶ್ರೀಗಳಾದ ಶ್ರೀ ವಿಶ್ವಪ್ರೀಯ ತೀರ್ಥ ಶ್ರೀಪಾದರು ಹೇಳಿದರು.
ಪೂರ್ಣ ಪ್ರಜ್ಞ ಶಿಕ್ಷಣ ಸಂಸ್ಥೆಗೆ ಒಳಪಟ್ಟ ಅದಮಾರು ಪೂರ್ಣ ಪ್ರಜ್ಞ ಶಾಲೆ ಮತ್ತು ಪಡುಬಿದ್ರೆ ಗಣಪತಿ ಹೈಸ್ಕೂಲ್ ಎರಡೂ ಶಾಲೆಗಳ ಸುಮಾರು 21 ಲಕ್ಷ ರೂಪಾಯಿ ಶುಲ್ಕವನ್ನು ಸಂಸ್ಥೆ ಮನ್ನಾ ಮಾಡಲು ನಿರ್ಧಾರಿಸಿದೆ. ದೇಶಾದ್ಯಂತ ಜನ ಉದ್ಯೋಗ ಇಲ್ಲದೆ ಗೃಹ ಬಂಧನದಲ್ಲಿದ್ದಾರೆ. ದೇಶದ ಪ್ರಜೆಗಳಲ್ಲಿ ದೇವರನ್ನು ಕಾಣಬೇಕಾಗಿದೆ. ಮನುಷ್ಯನ ಮಿತಿ ಮೀರಿದ ನಡವಳಿಕೆಯಿಂದ ಆಪತ್ತು ಬಂದೊದಗಿದೆ ಎಂದರು.
ಮಠದ ಕಡೆಯಿಂದ 2,000 ದಿನಸಿ ಕಿಟ್ ವಿತರಿಸಲಾಗಿದ್ದು, ಪ್ರಧಾನಮಂತ್ರಿ ಪರಿಹಾರ ನಿಧಿಗೆ 5 ಲಕ್ಷ ರೂ. ನೀಡಿದ್ದೇವೆ ಎಂದು ತಿಳಿಸಿದರು.