ಉಡುಪಿ: ಮಂಗಳೂರಿನಿಂದ ಜಿಲ್ಲೆಗೆ ಆಗಮಿಸಿದ ಕೊರೊನಾ ಲಸಿಕೆಯನ್ನು ಜಾಗಟೆ ಮತ್ತು ಘಂಟಾನಾದದ ಮೂಲಕ ಜಿಲ್ಲಾಡಳಿತ ಸ್ವಾಗತಿಸಿದೆ. ಮೊದಲ ಹಂತದಲ್ಲಿ 12,000 ಡೋಸೇಜ್ ತರಿಸಿಕೊಂಡಿರುವ ಜಿಲ್ಲಾಡಳಿತ ಅಜ್ಜರಕಾಡು ಆರೋಗ್ಯಾಧಿಕಾರಿ ಕಚೇರಿಯಲ್ಲಿರುವ ಕೋಲ್ಡ್ ಸ್ಟೋರೇಜ್ನಲ್ಲಿ ಇರಿಸಿದೆ.
ಈಗಾಗಲೇ ಲಸಿಕೆ ಸ್ವೀಕರಿಸಲು ಜಿಲ್ಲೆಯಲ್ಲಿ ನೋಂದಾಯಿತರಾಗಿರುವ 22,230 ಮಂದಿಗೆ ಮೊದಲ ಲಸಿಕೆ ಸಿಗಲಿದೆ. ಮೊದಲ ಸುತ್ತಿನಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಆದ್ಯತೆ ನೀಡಿರುವ ಜಿಲ್ಲಾಡಳಿತ ಡಿ ಗ್ರೂಪ್ ನೌಕರರಿಂದ ವೈದ್ಯಾಧಿಕಾರಿಗಳವರೆಗೆ ಎಲ್ಲರಿಗೂ ಮೊದಲ ಸುತ್ತಿನಲ್ಲಿ ಲಸಿಕೆಯನ್ನು ವಿತರಣೆ ಮಾಡಲಿದೆ.
ಜಿಲ್ಲೆಯಲ್ಲಿ ಐದು ಸರ್ಕಾರಿ ಕೇಂದ್ರಗಳು ಮತ್ತು ಒಂದು ಖಾಸಗಿ ಕೇಂದ್ರದ ಮೂಲಕ ಲಸಿಕೆ ವಿತರಣೆ ನಡೆಯಲಿದೆ. 16ನೇ ತಾರೀಖಿನಂದು ಜಿಲ್ಲೆಯಲ್ಲಿ ಲಸಿಕೆ ವಿತರಣೆ ಆರಂಭವಾಗಲಿದ್ದು ಪ್ರತಿ ಕೇಂದ್ರದಲ್ಲಿ 100 ಜನರಂತೆ ದಿನಕ್ಕೆ 600 ಜನರಿಗೆ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಜಿಲ್ಲಾಡಳಿತ ಮುಂದಿನ ದಿನಗಳಲ್ಲಿ ಲಸಿಕೆ ವಿತರಿಸಲು 94 ಕೇಂದ್ರಗಳನ್ನು ಗುರುತಿಸಿದೆ.