ಉಡುಪಿ: ಮಂಗಳೂರು ಅಂತಾರಾಷ್ಟ್ರೀಯ ಏರ್ಪೋರ್ಟ್ನಲ್ಲಿ ಸಜೀವ ಬಾಂಬ್ ಇರಿಸಿದ್ದ ಆರೋಪಿಸಿ ಆದಿತ್ಯ ರಾವ್ ಬಂಧನದ ಹಿನ್ನೆಲೆಯಲ್ಲಿ ಮಣಿಪಾಲದಲ್ಲಿರುವ ಆತನ ಮನೆಯಲ್ಲಿ ಪೊಲೀಸರು ತಲಾಶ್ ನಡೆಸಿದ್ದಾರೆ.
ಮಣಿಪಾಲದ ಅನಂತನಗರದಲ್ಲಿರುವ ಆದಿತ್ಯ ರಾವ್ ಮನೆಯಲ್ಲಿ ಸದ್ಯ ಯಾರೂ ವಾಸವಿಲ್ಲ. ಕೆಲವು ದಿನಗಳಿಂದ ಬಾಗಿಲು ಹಾಕಿರುವ ಮನೆಯಲ್ಲಿ ಸಾಕ್ಷ್ಯ ಸಂಗ್ರಹಕ್ಕೆ ಮಣಿಪಾಲ ಠಾಣೆಯ ಪೊಲೀಸರು ಉಡುಪಿ ಎಸ್ ಪಿ ಸೂಚನೆಯಂತೆ ದಾಖಲೆಗಳ ಹುಡುಕಾಟ ನಡೆಸಿದ್ದಾರೆ.
ಆದಿತ್ಯ ರಾವ್ ತಂದೆ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಆಗಿದ್ದು, ಆತನ ಸಹೋದರ ಕೂಡ ಮೂಡುಬಿದರೆಯಲ್ಲಿ ಬ್ಯಾಂಕ್ ನೌಕರರಾಗಿದ್ದಾರೆ. ಆದಿತ್ಯನ ತಾಯಿ ಕೆಲ ದಿನಗಳ ಹಿಂದೆ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದರು. ಬಳಿಕ ಇಡೀ ಕುಟುಂಬ ಮಣಿಪಾಲದಿಂದ ಮಂಗಳೂರಿನ ಚಿಲಿಂಬಿಗೆ ಸ್ಥಳಾಂತರವಾಗಿದೆ.
ಆದಿತ್ಯ ರಾವ್ ಮನೆ ಪ್ರವೇಶಿಸಲಿರುವ ಪೊಲೀಸರು:
ಆರೋಪಿ ಆದಿತ್ಯ ರಾವ್ ಬಂಧನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಣಿಪಾಲದ ಹುಡ್ಕೋ ಕಾಲೋನಿಯಲ್ಲಿರುವ ಆದಿತ್ಯ ರಾವ್ ಮನೆ ತಲುಪಿರುವ ಪೊಲೀಸರು ಸಾಕ್ಷ್ಯಗಳನ್ನು ಕಲೆ ಹಾಕಲು ಮುಂದಾಗಿದ್ದಾರೆ.
ಈಗಾಗಲೇ ಮಣಿಪಾಲ ಅನಂತ ನಗರದಲ್ಲಿರುವ ಆದಿತ್ಯ ರಾವ್ ಮನೆ ಪ್ರವೇಶ ಮಾಡಿ ಕಾಯುತ್ತಿರುವ ಮಣಿಪಾಲ್ ಪೋಲಿಸರು ಮನೆಯ ಬಾಗಿಲು ತೆರೆದು ಸಾಕ್ಷ್ಯ ಸಂಗ್ರಹಕ್ಕೆ ಕಾಯುತ್ತಿದ್ದಾರೆ. ಆದಿತ್ಯನ ಮನೆ ಬಾಗಿಲು ಒಡೆಯಲಿರುವ ಪೊಲೀಸರು ಬೆಂಗಳೂರು ಪೊಲೀಸರ ಆದೇಶಕ್ಕಾಗಿ ಕಾಯುತ್ತಿದ್ದಾರೆ ಎಂದು ತಿಳಿದುಬಂದಿದೆ.