ಉಡುಪಿ: ಜಿಲ್ಲೆಯ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸದಸ್ಯೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಅಲೆವೂರು ಗ್ರಾಮದ ಕುಕ್ಕಿಕಟ್ಟೆಯಲ್ಲಿ ನಡೆದಿದೆ.
ಆಶಾ ಶೆಟ್ಟಿ (48) ಆತ್ಮಹತ್ಯೆ ಮಾಡಿಕೊಂಡವರು. ಉಡುಪಿ ಬಿಜೆಪಿ ಮಹಿಳಾ ಮೋರ್ಚಾದಲ್ಲಿ ಸಕ್ರಿಯರಾಗಿದ್ದ ಅವರು ತುಳುಕೂಟ, ಚೆಂಡೆ ಬಳಗ, ಭಜನಾ ಮಂಡಳಿಯ ಸದಸ್ಯೆಯಾಗಿದ್ದರು. ಆತ್ಮಹತ್ಯೆಗೂ ಮುನ್ನ ಡೆತ್ನೋಟ್ ಬರೆದಿಟ್ಟು, ಅದರಲ್ಲಿ ತನ್ನ ಕಣ್ಣುಗಳನ್ನು ದಾನ ಮಾಡಿ ಎಂದು ಹೇಳಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಆಶಾ ಅವರ ಮಗ ಸಹ ಆತ್ಮಹತ್ಯೆ ಮಾಡಿಕೊಂಡಿದ್ದನಂತೆ. ಈ ನೋವಿನಿಂದಲೇ ಆಶಾ ಶೆಟ್ಟಿ ಸಾವಿಗೆ ಕೊರಳೊಡ್ಡಿರಬಹುದು ಎಂದು ಶಂಕಿಸಲಾಗಿದೆ. ಸದ್ಯ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.