ಉಡುಪಿ: ತಾಲೂಕಿನ ನೇಜಾರು ಸಮೀಪದ ತೃಪ್ತಿನಗರದಲ್ಲಿ ಭಾನುವಾರ ಬೆಳಕಿಗೆ ಬಂದ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣದ ಸುತ್ತ ಸಾಕಷ್ಟು ಅನುಮಾನ ಮೂಡಿದೆ. ಶಂಕಿತ ಆರೋಪಿಯ ಬಗ್ಗೆ ಸ್ಥಳೀಯ ಆಟೋ ಚಾಲಕರೊಬ್ಬರು ಮಾಹಿತಿ ನೀಡಿದ್ದಾರೆ.
ನೇಜಾರು ಸಮೀಪದ ತೃಪ್ತಿ ನಗರದಲ್ಲಿ ವಾಸವಿದ್ದ ಹಸೀನಾ, ಮಕ್ಕಳಾದ ಅಫ್ನಾನ್ (23), ಅಯ್ನಾಜ್ (21) ಹಾಗೂ ಆಸೀಂ (12) ಹತ್ಯೆಗೀಡಾದವರು. ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದು ಬರ್ಬರವಾಗಿ ಕೊಂದಿದ್ದಾನೆ ಎಂದು ಹೇಳಲಾಗುತ್ತಿದೆ. ಮಲ್ಪೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮನೆಯ ಸುತ್ತಮುತ್ತಲಿನ ಸಿಸಿಟಿವಿ, ಈ ಭಾಗದಲ್ಲಿ ಸಂಚರಿಸುವ ವಾಹನಗಳನ್ನು ಪರಿಶೀಲಿಸುತ್ತಿದ್ದಾರೆ.
ಆರೋಪಿತ ವ್ಯಕ್ತಿಯು ಈತ ಪರಿಚಯಸ್ಥನೇ ಆಗಿರಬೇಕು ಎಂಬ ಅನುಮಾನ ಕಾಡುತ್ತಿದೆ. ತಾಯಿ, ಮೂವರು ಮಕ್ಕಳನ್ನು ಹತ್ಯೆ ಮಾಡಿರುವ ರೀತಿ ನೋಡಿದರೆ ಈತನು ರಾತ್ರಿ ಮನೆಯಲ್ಲಿ ತಂಗಿರಬಹುದು, ಇಲ್ಲವೇ ಮನೆಗೆ ನುಗ್ಗಿ ಕೃತ್ಯ ಎಸಗಿರಬಹುದು ಎಂಬ ಅನುಮಾನ ಮೂಡಿದೆ. ಯಾಕೆಂದರೆ ಅಫ್ನಾನ್ ಮತ್ತು ಅಯ್ನಾಜ್ ಯುವಕರಾಗಿದ್ದು, ಅಷ್ಟು ಸುಲಭವಾಗಿ ಒಬ್ಬನೇ ನಾಲ್ವರನ್ನು ಕೊಲ್ಲುವುದು ಸುಲಭವಲ್ಲ. ಪರಿಚಯಸ್ಥನೇ ಈ ಕೃತ್ಯ ಎಸಗಿರಬಹುದು ಎಂದು ಮಲ್ಪೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.
ಆಟೋ ಚಾಲಕನ ಪ್ರತಿಕ್ರಿಯೆ: ಘಟನೆ ಕುರಿತಂತೆ ಶಂಕಿತ ಆರೋಪಿ ಬಗ್ಗೆ ಆಟೋ ಚಾಲಕ ನೇಜಾರಿನ ಶ್ಯಾಮ್ ಪ್ರತಿಕ್ರಿಯೆ ನೀಡಿದ್ದಾರೆ. ''ಸಂತೆಕಟ್ಟೆ ಬಳಿ ಇದ್ದಾಗ ಹೂವಿನ ಮಾರ್ಕೆಟ್ ಬಳಿ ವ್ಯಕ್ತಿಯೋರ್ವ ನನ್ನ ಆಟೋ ನಿಲ್ಲಿಸಿ ತೃಪ್ತಿ ಲೇಔಟ್ ಬಳಿ ಬಿಡುವಂತೆ ಹೇಳಿದರು. ಬಳಿಕ ನಾನು ಅವರನ್ನು ಹತ್ತಿಸಿಕೊಂಡು ಮನೆಯ ಗೇಟ್ ಬಳಿ ಬಿಟ್ಟು, ಬಾಡಿಗೆ ತೆಗೆದುಕೊಂಡು ಹೊರಟು, ವಾಪಸ್ ತೆರಳಿದೆ. ಆದರೆ 15 ನಿಮಿಷದಲ್ಲೇ ಅದೇ ವ್ಯಕ್ತಿ ನಮ್ಮ ಸಂತೇಕಟ್ಟೆಯಲ್ಲಿನ ಆಟೋ ಸ್ಟ್ಯಾಂಡ್ಗೆ ಮರಳಿ ಬಂದರು. ಆಗ 10 ನಿಮಿಷ ಅಲ್ಲಿಯೇ ನಿಲ್ಲಿ ಅಂದಿದ್ದರೆ ನಾನೇ ನಿಂತು ಮರಳಿ ಕರೆತರುತ್ತಿದ್ದೆನಲ್ಲ ಎಂದು ಹೇಳಿದೆ. ಆಗ ಅವರು ಪರವಾಗಿಲ್ಲ ಎಂದು ಹೇಳುತ್ತ ಮತ್ತೊಂದು ಆಟೋದಲ್ಲಿ ತೆರಳಿದರು. ಮಾರ್ಗಮಧ್ಯೆ ವೇಗವಾಗಿ ಹೋಗುವಂತೆ ಆಟೋ ಚಾಲಕನಿಗೆ ಆ ವ್ಯಕ್ತಿಯು ಹೇಳುತ್ತಿದ್ದನಂತೆ. ಆದರೆ ಟ್ರಾಫಿಕ್ನಲ್ಲಿ ಜಾಸ್ತಿ ವೇಗವಾಗಿ ಹೋಗಲಾಗದು ಎಂದು ಚಾಲಕ ಹೇಳಿದ್ದಾನೆ'' ಎಂದು ಆಟೋ ಚಾಲಕ ಶ್ಯಾಮ್ ಹೇಳಿದರು.
''ಕೊಲೆ ಆರೋಪಿ ಬೋಳು ತಲೆ, ಬಿಳಿ ಬಣ್ಣದ ವ್ಯಕ್ತಿಯಾಗಿದ್ದು, ಮಾಸ್ಕ್ ಧರಿಸಿ ಬಂದಿದ್ದರು. ಬ್ಯಾಗ್ ಹಾಕಿಕೊಂಡು ಬೈಕ್ನಲ್ಲಿ ಬಂದು ಇಳಿದಿದ್ದರು. ಕನ್ನಡ ಭಾಷೆ ಮಾತನಾಡುತ್ತಿದ್ದರು. ನನಗೆ ದಾರಿ ತಪ್ಪಿದಾಗ ಅವರೇ ಬೋರ್ಡ್ ತೋರಿಸಿ ಇಲ್ಲೇ ಬಿಡಿ ಎಂದಿದ್ದರು. ನಾನು ಮೀಟರ್ ಚಾರ್ಜ್ನಷ್ಟು ಬಾಡಿಗೆ ತೆಗೆದುಕೊಂಡು ಅಲ್ಲಿಂದ ವಾಪಸ್ ಬಂದಿದ್ದೆ'' ಎಂದು ಆಟೋ ಚಾಲಕ ಹೇಳಿದರು.
ಎಸ್ಪಿ ಪ್ರತಿಕ್ರಿಯೆ: ಘಟನೆ ಕುರಿತಂತೆ ಮಾಹಿತಿ ನೀಡಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕುಮಾರ್, ''ನೇಜಾರುವಿನ ತೃಪ್ತಿ ನಗರದಲ್ಲಿ ಕುಟುಂಬವೊಂದರ ನಾಲ್ವರ ಹತ್ಯೆಗೆ ಸಂಬಂಧಿಸಿದಂತೆ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಾಗುವುದು. ನಾಲ್ವರನ್ನು ಕೊಲೆ ಮಾಡಲಾಗಿದೆ. ಘಟನೆಯಲ್ಲಿ ಮನೆಯ ಯಜಮಾನಿ ಹಸೀನಾ ಅವರ ಅತ್ತೆಗೂ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆಯ ಯಜಮಾನ ವಿದೇಶದಲ್ಲಿದ್ದು, ಅವರನ್ನು ಸಂಪರ್ಕಿಸುತ್ತೇವೆ. ಮನೆಯಲ್ಲಿ ಯಾವುದೇ ವಸ್ತುಗಳು ಕಳ್ಳತನವಾದ ಬಗ್ಗೆ ಸಾಕ್ಷ್ಯ ಸಿಕ್ಕಿಲ್ಲ. ಕೊಲೆಯ ಹಿಂದಿನ ಕಾರಣ ತನಿಖೆಯಿಂದ ಗೊತ್ತಾಗಲಿದೆ'’ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಉಡುಪಿ: ತಾಯಿ, ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ