ಉಡುಪಿ: ಜಿಲ್ಲೆಯ ಕಾರ್ಕಳ ಶಾಸಕ, ಸರ್ಕಾರದ ಮುಖ್ಯ ಸಚೇತಕ ಸುನಿಲ್ ಕುಮಾರ್ ಮೇಲೆ ಸಿಮೆಂಟ್ ಕಿಕ್ ಬ್ಯಾಕ್ ಆರೋಪ ಕೇಳಿ ಬಂದಿದೆ.
ಸುನಿಲ್ ಕುಮಾರ್ ಸರ್ಕಾರಿ ಕಾಮಗಾರಿಯ ಗುತ್ತಿಗೆ ನೀಡಿರುವ ಕಾಂಟ್ರಾಕ್ಟರ್ಗಳಿಂದ ನೂರಾರು ಚೀಲ ಸಿಮೆಂಟ್ ಪಡೆದು ತನ್ನ ಖಾಸಗಿ ಕಚೇರಿಯನ್ನು ನಿರ್ಮಾಣ ಮಾಡುತ್ತಿದ್ದಾರೆ ಎಂಬ ಆರೋಪ ಶಾಸಕರ ವಿರುದ್ಧ ಕೇಳಿ ಬಂದಿದೆ.
ಇದಕ್ಕೆ ಸಂಬಂಧಿಸಿದಂತೆ ವಿಡಿಯೋಗಳನ್ನು ರಿಲೀಸ್ ಮಾಡಲಾಗಿದೆ. ಕಾರ್ಕಳ ನಗರಸಭೆಯ ಸದಸ್ಯ ಕಾಂಗ್ರೆಸ್ ನಾಯಕ ಶುಭದ ರಾವ್ ಈ ಆರೋಪ ಮಾಡಿದ್ದಾರೆ.
ಕಾರ್ಕಳ ತಾಲೂಕು ಪಂಚಾಯತ್ ರಸ್ತೆಯಲ್ಲಿ ಸುನಿಲ್ ಕುಮಾರ್ ಅವರ ಖಾಸಗಿ ಜಮೀನಿನಲ್ಲಿ ಬಹು ಮಹಡಿಯ ಕಚೇರಿ ನಿರ್ಮಾಣ ಆಗುತ್ತಿದೆ. ಕಟ್ಟಡ ನಿರ್ಮಾಣಕ್ಕೆ ಅಲ್ಟ್ರಾಟೆಕ್ ಕಂಪನಿಯ ನಾಟ್ ಫಾರ್ ಸೇಲ್ ಎಂದು ನಮೂದಿಸಿರುವ ಸಿಮೆಂಟ್ಗಳನ್ನು ಬಳಸಲಾಗಿದೆ. ಗುತ್ತಿಗೆ ನೀಡಿದ ಕಾಂಟ್ರಾಕ್ಟರ್ಗಳಿಂದ ಶಾಸಕ ಸುನಿಲ್ ಕುಮಾರ್ ಸಿಮೆಂಟ್ ಚೀಲಗಳನ್ನು ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.
ಶಾಸಕ ಸುನಿಲ್ ಕುಮಾರ್ ಸರ್ಕಾರಿ ವ್ಯವಸ್ಥೆಗಳನ್ನು ದುರುಪಯೋಗಪಡಿಸಿದ್ದಾರೆ ಎಂದು ಆರೋಪಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಲೋಕಾಯುಕ್ತರಿಗೆ ದೂರು ನೀಡಲು ಕಾರ್ಕಳ ಕಾಂಗ್ರೆಸ್ ನಿರ್ಧರಿಸಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.