ಉಡುಪಿ : ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ಕೋವಿಡ್-19 ವೈರಸ್ ಸಾಮುದಾಯಿಕವಾಗಿ ಹಬ್ಬುತ್ತಿರುವ ಹಿನ್ನೆಲೆ, ಸಾರ್ವಜನಿಕರ ಹಿತದೃಷ್ಟಿಯಿಂದ ಜು.13 ರಿಂದ ಜು.31ರ ತನಕ ಕುಂದಾಪುರ ಪುರಸಭಾ ವ್ಯಾಪ್ತಿಯ ಎಲ್ಲಾ ಅಂಗಡಿಗಳನ್ನು ಮಧ್ಯಾಹ್ನ 2 ಗಂಟೆಯ ಬಳಿಕ ಸ್ವಯಂ ಪ್ರೇರಿತ ಬಂದ್ ಮಾಡಲು ಸ್ಥಳೀಯ ವರ್ತಕರು ತೀರ್ಮಾನಿಸಿದ್ದಾರೆ.
ಇಂದು ನಗರದ ಖಾಸಗಿ ಹೋಟಲ್ನಲ್ಲಿ ಸಭೆ ಸೇರಿ ಈ ನಿರ್ಧಾರಕ್ಕೆ ಬರಲಾಗಿದೆ. ಮೆಡಿಕಲ್, ಹಾಲು, ಹೋಟೆಲ್, ಬಾರ್ ಹೊರತುಪಡಿಸಿ ಉಳಿದೆಲ್ಲಾ ಅಂಗಡಿಗಳು ಬೆಳಗ್ಗಿನಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ತೆರೆಯಲಿದ್ದು, ಆ ಬಳಿಕ ಸ್ವಯಂ ಪ್ರೇರಿತ ಬಂದ್ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ಎಲ್ಲ ಅಂಗಡಿಗಳಿಗೂ ಭೇಟಿ ನೀಡಿ ಮನವಿ ಮಾಡಲಾಗಿದ್ದು, ಸ್ವಯಂ ಪ್ರೇರಿತ ಬಂದ್ಗೆ ಎಲ್ಲರ ಬೆಂಬಲ ಸಿಕ್ಕಿದೆ ಎಂದು ವರ್ತಕರ ಪ್ರಮುಖರು ತಿಳಿಸಿದ್ದಾರೆ. ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ, ಜಿಲ್ಲಾಡಳಿತದೊಂದಿಗೆ ನಮ್ಮ ಹೊಣೆಗಾರಿಕೆಯೂ ಇದೆ. ಸ್ವಯಂ ಪ್ರೇರಿತ ಬಂದ್ ಕುರಿತಂತೆ ಸಹಾಯಕ ಆಯುಕ್ತರು ಹಾಗೂ ಪೊಲೀಸ್ ಇಲಾಖೆಗೂ ಮನವಿ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.