ಕುಂದಾಪುರ (ಉಡುಪಿ): ಮೀನಿನ ಅಂಗಡಿಯ ಛಾವಣಿಯ ಕಬ್ಬಿಣದ ರಾಡ್ಗೆ ನೇಣು ಬಿಗಿದು ವಿವಾಹಿತ ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ.
ಮೂಲತಃ ಸಾಗರದವನಾದ, ಸದ್ಯ ದೇವಲ್ಕುಂದ ತಟ್ಟೆಗೊಡ್ಲು ಎಂಬಲ್ಲಿನ ಪತ್ನಿಯ ನಿವಾಸದಲ್ಲಿ ವಾಸವಿದ್ದ ಸುಬ್ರಹ್ಮಣ್ಯ ಪೂಜಾರಿ (36) ಆತ್ಮಹತ್ಯೆಗೆ ಶರಣಾದ ವ್ಯಕ್ತಿ.
ಸುಬ್ರಹ್ಮಣ್ಯ ಪೂಜಾರಿ ದೇವಲ್ಕುಂದ ಮೂಲದ ಯುವತಿಯನ್ನು ವಿವಾಹವಾದ ಬಳಿಕ ಇಲ್ಲಿಯೇ ವಾಸವಾಗಿದ್ದ. ಮೊದಲಿಗೆ ಡ್ರೈವಿಂಗ್ ಕೆಲಸ ಮಾಡುತ್ತಿದ್ದ ಆತ ಬಳಿಕ ಎಲೆಕ್ಟ್ರಿಶಿಯನ್ ಆಗಿ ಸೇರಿ ಕೂಲಿ ಕಾರ್ಯಗಳನ್ನು ಮಾಡಿಕೊಂಡಿದ್ದ. ವಿಪರೀತ ಕುಡಿತದ ಚಟ ಹೊಂದಿದ್ದ ಈತ ಆಗಾಗ ಮನೆಯಲ್ಲೂ ತಗಾದೆ ತೆಗೆಯುತ್ತಿದ್ದ ಎನ್ನಲಾಗಿದೆ. ಶನಿವಾರ ರಾತ್ರಿ ಹಟ್ಟಿಯಂಗಡಿ ಸಮೀಪದ ಮೀನಿನಂಗಡಿಗೆ ಆಗಮಿಸಿದ ವೇಳೆ ಯಾವುದೋ ಕಾರಣಕ್ಕೆ ಜಿಗುಪ್ಸೆಗೊಂಡು ನೇಣಿಗೆ ಕೊರಳೊಡ್ಡಿರಬಹುದು ಎಂದು ಶಂಕಿಸಲಾಗಿದೆ.
ಬೆಳಗ್ಗೆ ಆತ್ಮಹತ್ಯೆ ವಿಚಾರ ಬೆಳಕಿಗೆ ಬಂದಿದೆ. ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.