ಉಡುಪಿ: ಕರಾವಳಿಯ ಗ್ರಾಮೀಣ ರಸ್ತೆಗಳಲ್ಲೂ ಕೆಎಸ್ಆರ್ಟಿಸಿ ಐರಾವತ ಬಸ್ಗಳು ಓಡಾಡುತ್ತೆ. ಈ ಲಕ್ಸುರಿ ಬಸ್‍ಗಳನ್ನು ನೋಡೋಕೆ ಜನ ಮುಗಿಬೀಳುತ್ತಿದ್ದಾರೆ. ಅರೇ ಇದೇನಪ್ಪಾ ಗ್ರಾಮೀಣ ಭಾಗದಲ್ಲಿ ಅದೂ ಕೂಡ ಐರಾವತ ಸಂಚಾರ ಎಂದು ಆಶ್ಚರ್ಯಪಡುತ್ತಿದ್ದೀರಾ? ನಿಮ್ಮೆಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ಈ ಬಸ್‍ನಲ್ಲಿ ಟಯರ್, ಸ್ಟೇರಿಂಗ್, ಗೇರ್, ಹೆಡ್‍ಲೈಟ್, ಕಿಟಕಿ, ತುರ್ತು ನಿರ್ಗಮನ ಕಿಟಕಿ, ಮಿರರ್ ಸೇರಿದಂತೆ ಎಲ್ಲವೂ ಇವೆ. ಆದರೆ, ಈ ಬಸ್‍ನಲ್ಲಿ ಪ್ರಯಾಣಿಸುವುದು ಮಾತ್ರ ಅಸಾಧ್ಯ. ಯಾಕೆಂದರೆ, ಇದು ಸಂಚರಿಸುವ ಬಸ್ಸಲ್ಲ ಬದಲಾಗಿ, ಸಣ್ಣ ಗಾತ್ರದ ಆಟಿಕೆಯ ಬಸ್.
ಕೇವಲ ಫೋಮ್ ಶೀಟ್ ಅನ್ನು ಬಳಸಿ ಥೇಟ್ ಕರ್ನಾಟಕ ಸಾರಿಗೆ ಸಂಸ್ಥೆಯ ಐರಾವತ ಹಾಗೂ ವೇಗದೂತ ವಿನ್ಯಾಸದಲ್ಲಿ ತದ್ರೂಪಿ ಬಸ್ ಅನ್ನು ಪ್ರಶಾಂತ್ ಆಚಾರ್ ನಿರ್ಮಿಸಿದ್ದಾರೆ. ಕುಂದಾಪುರದ ಹೆಮ್ಮಾಡಿ ಸಮೀಪದ ಡೈರಿ ಸರ್ಕಲ್‍ನಲ್ಲಿ ಅಣ್ಣ ನಾಗರಾಜ್ ಅವರೊಂದಿಗೆ ಓಂಕಾರ್ ಶೀಟ್ ಮೆಟಲ್ ವರ್ಕ್‌ಶಪ್‍ನಲ್ಲಿ ಕೆಲಸ ಮಾಡ್ತಾರೆ. ಪ್ರಶಾಂತ್ ಆಚಾರ್ ತಯಾರಿಸಿದ ಎರಡೂ ಬಸ್‍ಗಳನ್ನು ಜೊತೆಗಿಟ್ಟು ಫೋಟೋ ತೆಗೆದರೆ ಯಾರೂ ಕೂಡ ಅದು ಆಟಿಕೆಯ ಬಸ್ಸೆಂದು ಹೇಳಲಾರರು. ಅಷ್ಟರಮಟ್ಟಿಗೆ ಪರ್ಫೆಕ್ಟ್ ಆಗಿ ಬಸ್‍ಗಳನ್ನು ತಯಾರಿಸಿದ್ದಾರೆ.
ಬಸ್‍ನ ಪ್ರತಿಯೊಂದು ಭಾಗಗಳನ್ನು ನಾಜೂಕು ಹಾಗೂ ತಾಳ್ಮೆಯಿಂದ ತಯಾರಿಸಿ ಆ ಭಾಗಗಗಳು ಎಲ್ಲಿ ಎಂದು ಯಾರೂ ಕೂಡ ಪ್ರಶ್ನಿಸದಷ್ಟು ಪರಿಪೂರ್ಣವಾಗಿ ಬಸ್ ತಯಾರಿಸಿದ್ದಾರೆ. ಪ್ರಶಾಂತ್ ಆಚಾರ್ ಈ ಸಾಹಸದಲ್ಲಿ ಅವರ ಇಬ್ಬರು ಸಹೋದರರು ಬೆನ್ನೆಲುಬಾಗಿ ತಮ್ಮನ ಕಲೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ.
ಪ್ರಶಾಂತ್‍ಗೆ ಮೊದಲಿಂದಲೂ ಸರ್ಕಾರಿ ಬಸ್ ಮೇಲೆ ತುಂಬಾ ಅಭಿಮಾನ. ಇದೇ ಕಾರಣಕ್ಕಾಗಿ ಅವರು ಸರ್ಕಾರಿ ಬಸ್‍ಗಳನ್ನು ತಯಾರಿಸುತ್ತಿದ್ದಾರೆ. ಪ್ರಶಾಂತ್ ಸಾಧನೆಯ ಬಗ್ಗೆ ಸುದ್ದಿ ತಿಳಿದ ಸ್ವತಃ: ಸಾರಿಗೆ ಸಚಿವರು ಪ್ರಶಾಂತ್ ರನ್ನು ಬರಮಾಡಿಕೊಂಡಿದ್ದಾರೆ. ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರನ್ನು ಭೇಟಿ ಮಾಡಿ ಸಚಿವರಿಗಾಗಿಯೇ ವಿಶೇಷವಾಗಿ ತಯಾರಿಸಿದ ಐರಾವತ ಬಸ್ ಅನ್ನು ಪ್ರಶಾಂತ್ ಉಡುಗೊರೆಯಾಗಿ ನೀಡಿದ್ದಾರೆ.
ಬಸ್ ಮಾದರಿಯನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿರುವ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಇವರ ಕೈಚಳಕಕ್ಕೆ ಶಹಬ್ಬಾಸ್ ತಿಳಿಸಿ, ಸರ್ಕಾರಿ ಬಸ್ಸೊಂದನ್ನು ಉಚಿತವಾಗಿ ನೀಡುದಾಗಿ ಹೇಳಿದ್ದಾರೆ. ಈ ಬಸ್‌ನ್ನು ಸ್ಮಾರ್ಟ್ ಸ್ಕೂಲ್ ಮಾಡಿ ಹಳ್ಳಿ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಮಹದಾಸೆ ಪ್ರಶಾಂತ್ ಮನೆಯವರದ್ದು. ಪ್ರಶಾಂತ್ ಅವರ ವಿಶಿಷ್ಟ ಕಲೆಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು, ಜೊತೆಗೆ ಸಚಿವರು ನೀಡವ ಬಸ್‌ನ್ನು ಹಳ್ಳಿಯ ಮಕ್ಕಳ ಶಿಕ್ಷಣಕ್ಕೆ ಬಳಸುವುದು ಶ್ಲಾಘನೀಯ.