ಉಡುಪಿ(ಏ.24): ನದಿಯಲ್ಲಿ ಚಿಪ್ಪು ಮೀನು ಹಿಡಿಯಲು ಹೋಗಿ ನಾಲ್ವರು ಯುವಕರಲ್ಲಿ ಮೂವರು ನೀರುಪಾಲು, ಓರ್ವ ಕಣ್ಮರೆಯಾದ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನಲ್ಲಿ ನಿನ್ನೆ(ಭಾನುವಾರ) ಸಂಜೆ ನಡೆದಿದೆ. ನೀರು ಪಾಲಾದ ಯುವಕರನ್ನ ಉಡುಪಿ ಮತ್ತು ಶೃಂಗೇರಿ ಮೂಲದವರು ಎಂದು ಗುರುತಿಸಲಾಗಿದೆ. ಇಬಾಜ್, ಫಜಾನ್ ಹಾಗೂ ಸೂಫಾನ್ ಫರಾನ್ ನೀರುಪಾಲಾದ ಯುವಕರು.
ಮೃತ ಯುವಕರು ರಂಜಾನ್ ಹಬ್ಬಕ್ಕೆ ಬ್ರಹ್ಮಾವರದ ಸಂಬಂಧಿಕರ ಮನೆಗೆ ಬಂದಿದ್ದರು. ಕುಕ್ಕುಡೆ ಕಿಣಿಯರ ಕುದ್ರು ಸಮೀಪ ಈ ಘಟನೆ ನಡೆದಿದೆ. 7 ಯುವಕರ ತಂಡ ಸಂಜೆ ದೋಣಿ ಮೂಲಕ ಮೀನು ಹಿಡಿಯಲು ತೆರಳಿತ್ತು. ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿ ಮೂವರು ಯುವಕರು ನೀರಿನಲ್ಲಿ ಕೊಚ್ಚಿ ಹೋಗಿರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಕಣ್ಮರೆಯಾದ ಯುವಕನಿಗಾಗಿ ಸ್ಥಳೀಯರು, ಪೊಲೀಸರು ಹಾಗೂ ಅಗ್ನಿಶಾಮಕ ದಳ ದಿಂದ ಶೋಧಕಾರ್ಯ ನಡೆಸಲಾಗುತ್ತಿದೆ.
ಈಜಲು ತೆರಳಿದ್ದ ಮೂವರು ಯುವಕರು ನೀರುಪಾಲು: ತುಂಗಭದ್ರಾ ನದಿಗೆ ಈಜಲು ತೆರಳಿದ್ದ ಮೂವರು ಯುವಕರು ನೀರುಪಾಲಾಗಿರುವ ಘಟನೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹಿರೇಗೋಣಿಗೆರೆ ಗ್ರಾಮದಲ್ಲಿ ಭಾನುವಾರ(ಏ.23) ನಡೆದಿತ್ತು. ಸಹೋದರರಾದ ಕಿರಣ್, ವರುಣ್ ಹಾಗೂ ಗ್ರಾಮದ ಪವನ್ ನೀರುಪಾಲಾದ ಯುವಕರು. ಈ ಬಗ್ಗೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳ ಸಿಬ್ಬಂದಿ ಹಾಗೂ ಪೊಲೀಸರು ಯುವಕರ ಮೃತದೇಹಗಳಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ. ಸದ್ಯ ನೀರುಪಾಲಾದ ಮೂವರಲ್ಲಿ ವರುಣ್ ಮೃತದೇಹ ಮಾತ್ರ ಪತ್ತೆಯಾಗಿದೆ. ಇನ್ನೂ ಇಬ್ಬರು ಯುವಕರ ಮೃತದೇಹಗಳ ಪತ್ತೆಗೆ ಶೋಧಕಾರ್ಯ ಮುಂದುವರೆದಿದೆ. ಎದೆ ಎತ್ತರಕ್ಕೆ ಬೆಳೆದು ನಿಂತಿದ್ದ ಮಕ್ಕಳನ್ನು ಕಳೆದುಕೊಂಡ ಪೋಷಕರು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಶಾಸಕ ಎಂ.ಪಿ. ರೇಣುಕಾಚಾರ್ಯ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಇದನ್ನೂ ಓದಿ: ದಾವಣಗೆರೆ: ನದಿಗೆ ಈಜಲು ತೆರಳಿದ್ದ ಮೂವರು ಯುವಕರು ನೀರುಪಾಲು
ಮೂವರು ಪಿಯುಸಿ ವಿದ್ಯಾರ್ಥಿಗಳು ಸಾವು: ಈಜಲು ತೆರಳಿದ್ದ ಮೂವರು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ನೀರುಪಾಲಾದ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ನಂದನಹೊಸೂರು ಗ್ರಾಮದಲ್ಲಿ ಮಾ.28 ರಂದು ನಡೆದಿತ್ತು. ನಂದನಹೊಸೂರು ಗ್ರಾಮದ ಗಿರೀಶ್ (18), ಹೊರಕೆರೆದೇವರಪುರ ಗ್ರಾಮದ ಸಂಜಯ್ (18) ಹಾಗೂ ಕಣಿವೆ ಜೋಗಿಹಳ್ಳಿ ಗ್ರಾಮದ ಮನು(19) ಮೃತ ವಿದ್ಯಾರ್ಥಿಗಳೆಂದು ಗುರುತಿಸಲಾಗಿತ್ತು. ಮೃತ ವಿದ್ಯಾರ್ಥಿಯೊಬ್ಬನ ತಂದೆ ಎತ್ತುಗಳ ಮೈ ತೊಳೆಯಲೆಂದು ಕೆರೆಗೆ ಹೋಗಿದ್ದರು. ಈ ವೇಳೆ ಮೂವರು ಅವರನ್ನೇ ಹಿಂಬಾಲಿಸಿಕೊಂಡ ಹೋಗಿದ್ದರು. ಆದರೆ, ಕೆರೆಯಲ್ಲಿ ಈಜಾಡುತ್ತಿದ್ದಾಗ ಆಳದ ಜಾಗದಲ್ಲಿ ಸಿಲುಕಿ ಈಜು ಬಾರದೇ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ಸ್ಥಳೀಯರು ತಿಳಿಸಿದ್ದರು. ಸಾವಿನ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಹೊಳಲ್ಕೆರೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು.
ಇದನ್ನೂ ಓದಿ: ಚಿತ್ರದುರ್ಗ: ಪರೀಕ್ಷೆಯ ಮುನ್ನಾದಿನ ಮೂವರು ಪಿಯುಸಿ ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವು..