ತುಮಕೂರು : ಜಿಲ್ಲೆಯಲ್ಲಿ ಪ್ರಸ್ತುತ ಯುವಕರಿಗೆ ಮದುವೆಯಾಗಲು ಹೆಣ್ಣುಗಳು ಸಿಗುತ್ತಿಲ್ಲ ಎಂಬ ವಿಷಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಜಿಲ್ಲೆಯ ಪ್ರತಿ ಗ್ರಾಮದಲ್ಲಿ ಮದುವೆಯಾಗಲು ಹೆಣ್ಣು ಸಿಗದೇ ವಯಸ್ಸು ಮೀರಿರುವ 30 ರಿಂದ 40 ಮಂದಿ ಯುವಕರು ಕಂಡು ಬರುತ್ತಾರೆ. ಕೃಷಿಕರಾಗಿರುವ ಕಾರಣ ನಮಗೆ ಹೆಣ್ಣು ಕೊಡ್ತಿಲ್ಲ ಎಂದು ಅವಿವಾಹಿತರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಗ್ರಾಮೀಣ ಭಾಗದಲ್ಲಿ ಸಣ್ಣ ಹಿಡುವಳಿದಾರರಿಗೆ ಮದುವೆ ಭಾಗ್ಯವೇ ಇಲ್ಲದಂತಾಗಿದೆ. ಗಾರ್ಮೆಂಟ್ಸ್ಗಳಲ್ಲಿ ಕೆಲಸ ಮಾಡುವ ಯುವಕರಿಗೆ ಹೆಣ್ಣು ಕೊಡ್ತಾರೆ. ರೈತರಾಗಿರುವವರಿಗೆ ಹೆಣ್ಣುಗಳು ಸಿಗುತ್ತಿಲ್ಲ. ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿರುವ ನಮಗೆ ಹೆಣ್ಣು ಕೊಡಲು ಹೆಣ್ಣು ಹೆತ್ತವರು ಮುಂದಾಗುತ್ತಿಲ್ಲ.
ಹೆಣ್ಣು ಸಿಗದೇ ಪರದಾಡುತ್ತಿರುವ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಯುವಕರು ಉತ್ತರ ಕರ್ನಾಟಕದ ದೂರದ ಊರುಗಳ ಹೆಣ್ಣನ್ನು ಮದುವೆ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರ ವಧು ಸಿಗದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಬೇಕಿದೆ. ಅಂತಹವರಿಗೆ ಆರ್ಥಿಕ ಸಹಾಯ ಮಾಡಬೇಕಿದೆ ಅಂತಾರೆ ಸ್ಥಳೀಯರು.
ಇದನ್ನೂ ಓದಿ: 45ರ ವರ 25ರ ವಧುವಿನ ವಿವಾಹ: ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿರೋ ಜೋಡಿಯ ಕಥೆ ಸ್ವಾರಸ್ಯಕರ
ವಧುವನ್ನು ಹುಡುಕಿಕೊಡುವಂತೆ ಯುವಕರು ತಹಶೀಲ್ದಾರ್ ಮೊರೆ ಹೋಗಿರುವ ಘಟನೆಯೂ ತಾಲೂಕಿನ ಲಕ್ಕಗೊಂಡನಹಳ್ಳಿಯಲ್ಲಿ ಜರುಗಿದೆ. ತಹಶೀಲ್ದಾರ್ ತೇಜಸ್ವಿನಿ ನೇತೃತ್ವದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಲಕ್ಕಗೊಂಡನಹಳ್ಳಿ, ತಿಪಟೂರು ತಾಲೂಕಿನ ತಿಮ್ಮಾಪುರ ಗ್ರಾಮದ 15 ಯುವಕರು ಹೆಣ್ಣುಗಳನ್ನು ಹುಡುಕಿ ಕೊಡುವಂತೆ ಅರ್ಜಿ ಸಲ್ಲಿಸಿದ್ರು.
ಇನ್ನೊಂದೆಡೆ ಹೆಣ್ಣು ಸಿಗದೇ ಬೇಸತ್ತು ಮದುವೆ ಭಾಗ್ಯವೇ ಈ ಜನ್ಮದಲ್ಲಿ ಸಾಧ್ಯವಿಲ್ಲ ಎಂದುಕೊಂಡಿದ್ದ 45 ವರ್ಷದ ವ್ಯಕ್ತಿಯೊಬ್ಬನ ಜೊತೆ 25 ವರ್ಷದ ಯುವತಿ ವಿವಾಹವಾಗಿದ್ದಾಳೆ. ಹೆಣ್ಣು ಸಿಗದೇ ಇದ್ದ ಶಂಕರ್ಗೆ ವಿಚ್ಛೇದಿತ ಮೇಘನಾಳೊಂದಿಗೆ ಮದುವೆಯಾಗಿದೆ.