ತುಮಕೂರು: ರೈತರ ಅಮೂಲ್ಯ ಬೆಳೆಗಳನ್ನು ನಾಶ ಮಾಡುತ್ತಿರೋ ಅಪಾಯಕಾರಿ ಮಿಡತೆಗಳ ಹಾವಳಿಗಳಿಂದ ಪಾರಾಗಲು ತುಮಕೂರಿನ ಕೆಲ ರೈತರು ಮಾರ್ಗೋಪಾಯಗಳನ್ನು ಕಂಡು ಹಿಡಿದಿದ್ದಾರೆ.
ಶೂನ್ಯ ಬಂಡವಾಳದಲ್ಲಿ ಯಾವುದೇ ರಾಸಾಯನಿಕ ಮಿಶ್ರಣವಿಲ್ಲದೇ ತಯಾರಿಸಿರುವ ಔಷಧದಿಂದ ಮಿಡತೆಗಳನ್ನು ಓಡಿಸಬಹುದು ಎನ್ನುತ್ತಿದ್ದಾರೆ ರೈತರು. ಇನ್ನು ತುಮಕೂರು ಮತ್ತು ಮಧುಗಿರಿ ಭಾಗದಲ್ಲಿ ಬಿಡಿ ಬಿಡಿಯಾಗಿ ಸಂಚರಿಸುವ ಮಿಡತೆಗಳು ಮುಖ್ಯವಾಗಿ ಎಕ್ಕದ ಗಿಡಗಳ ಮೇಲೆ ಕುಳಿತು ಎಲೆಗಳನ್ನು ತಿಂದು ಹಾಕುತ್ತಿವೆ.
ಅಲ್ಲದೇ ಇಲ್ಲಿ ಕಾಣಸಿಗುವ ಮಿಡತೆಗಳು ದೊಡ್ಡ ದೊಡ್ಡ ಎಲೆಗಳನ್ನು ತಿಂದು ಹಾಕುವಂತಹುದು. ಶೇ.90 ರಷ್ಟು ಮಿಡತೆಗಳು ಎಕ್ಕದ ಗಿಡಗಳನ್ನು ತಿನ್ನುತ್ತವೆ. ಇನ್ನು ಶೆ.10ರಷ್ಟು ಮಿಡತೆಗಳು ರೈತರ ಬೆಳೆಗಳ ಮೇಲೆ ದಾಳಿ ಮಾಡುತ್ತವೆ. ಹೀಗಾಗಿ ಮಿಡತೆಗಳಿಂದ ಬೆಳೆ ರಕ್ಷಿಸಿಕೊಳ್ಳಲು ರೈತ ಪ್ರತಾಪ್, ಸುರೇಶ್, ಅಭಿಲಾಷ್ ತಂಡ ರೈತರಿಗೆ ಸುಲಭವಾಗಿ ಔಷಧಗಳನ್ನು ತಯಾರಿಸುವ ಸಲಹೆ ನೀಡಿದ್ದಾರೆ.
ಒಂದು ಎಕರೆ ಜಮೀನಿಗೆ 40ಲೀ. ನೀರಿನಲ್ಲಿ ಅರ್ಧ ಕೆ.ಜಿ. ಮರಳುಮಿಶ್ರಿತ ಮಣ್ಣು, ಇದ್ದಿಲು ಪುಡಿ, 20 ಮಿಲಿಯಷ್ಟು ಸುಣ್ಣದ ದ್ರಾವಣ ಮಿಶ್ರಣ ಮಾಡಬೇಕು. 15 ದಿನಗಳಿಗೊಮ್ಮೆ ಎರಡು ಬೆಳೆಗಳಿಗೆ ಸಿಂಪಡಣೆ ಮಾಡಬೇಕು. ಇದರಿಂದ ಮಿಡತೆಗಳು ಈ ದ್ರಾವಣವನ್ನು ಸೇವಿಸಿದ್ರೆ ಅವುಗಳಲ್ಲಿನ ಜೀರ್ಣಕ್ರಿಯೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಅವುಗಳು ಬೆಳೆಗಳ ಹತ್ತಿರವೂ ಸುಳಿಯುವುದಿಲ್ಲ ಎಂಬುದು ಯುವ ರೈತರ ಅಭಿಪ್ರಾಯವಾಗಿದೆ.