ತುಮಕೂರು: ಜಿಲ್ಲೆಯಲ್ಲಿ ಮೊದಲ ಬಾರಿಗೆ ಯಾವುದೇ ರೀತಿಯ ಟ್ರಾವೆಲ್ ಹಿಸ್ಟರಿಯೇ ಇಲ್ಲದ ಜೊತೆಗೆ ಸೋಂಕಿತ ವ್ಯಕ್ತಿಯ ಸಂಪರ್ಕವೂ ಇಲ್ಲದ ವ್ಯಕ್ತಿಯೊಬ್ಬನಿಗೆ ಕೊರೊನಾ ಬಂದಿರುವುದು ಖಾತ್ರಿಯಾಗಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ.
ಇದುವರೆಗೂ ಜಿಲ್ಲೆಯಲ್ಲಿ ತಬ್ಲಿಘಿ ಜಮಾತ್ನಲ್ಲಿ ಭಾಗವಹಿಸಿದ್ದವರು, ಗುಜರಾತ್ನಿಂದ ಬಂದವರು, ಅದೇ ರೀತಿ ಬೆಂಗಳೂರಿನ ಪಾದರಾಯನಪುರದಿಂದ ಬಂದ ವ್ಯಕ್ತಿಯಿಂದ ಸೋಂಕು ಹರಡಿರುವುದು ಸ್ಪಷ್ಟವಾಗಿತ್ತು. ಆದ್ರೆ ಇದೀಗ ಕೆಎಸ್ಆರ್ಟಿಸಿ ಬಸ್ ಚಾಲಕರೊಬ್ಬರಿಗೆ ಕೊರೊನಾ ಬಂದಿದೆ. ಶಾಕಿಂಗ್ ಎಂಬಂತೆ ಈ ವ್ಯಕ್ತಿಗೆ ಸೋಂಕಿತ ಪ್ರದೇಶ ಹಾಗೂ ಸೋಕಿಂತ ವ್ಯಕ್ತಿಯಿಂದ ಕೊರೊನಾ ಬಂದಿರುವ ಸ್ಪಷ್ಟತೆ ಇಲ್ಲ. ಜೊತೆಗೆ ಯಾವುದೇ ರೀತಿಯ ಟ್ರಾವೆಲ್ ಹಿಸ್ಟರಿಯೂ ಸಹ ಲಭ್ಯವಾಗಿಲ್ಲ. ಹೀಗಿದ್ದರೂ ಚಾಲಕನಿಗೆ ಸೋಂಕು ತಗುಲಿರುವುದು ಕೊರೊನಾದ ಭೀಕರತೆಯನ್ನು ಅನಾವರಣಗೊಳಿಸಿದೆ.
ರಾಮನಗರ ಜಿಲ್ಲೆಯ ಮಾಗಡಿ ಕೆಎಸ್ಆರ್ಟಿಸಿ ಬಸ್ ಡಿಪೋದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಸೋಂಕಿತ ಮೂಲತಃ ತುಮಕೂರು ಜಿಲ್ಲೆ ಮಾನವಿನಕುಂಟೆ ಗ್ರಾಮದವರು. ಬಸ್ಗಳ ಸಂಚಾರಕ್ಕೆ ಸರ್ಕಾರದ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆ ಡಿಪೋಗೆ ಬಂದು ಕರ್ತವ್ಯಕ್ಕೆ ಹಾಜರಾಗುವ ಮುನ್ನ ಕೋವಿಡ್-19 ಟೆಸ್ಟ್ಗೆ ಒಳಪಡಿಸಿದಾಗ, ಸೋಂಕು ಇರುವುದು ದೃಢವಾಗಿದೆ. ಯಾವುದೇ ರೀತಿಯ ರೋಗ ಲಕ್ಷಣಗಳೂ ಇಲ್ಲದ ಚಾಲಕನಿಗೆ ಸೋಂಕು ತಗುಲಿದ್ದಾದರೂ ಹೇಗೆ ಎಂಬುದನ್ನು ಪತ್ತೆ ಹಚ್ಚಲು ಜಿಲ್ಲಾಡಳಿತಕ್ಕೆ ಸಾಧ್ಯವಾಗುತ್ತಿಲ್ಲ. ಲಾಕ್ಡೌನ್ ಸಂದರ್ಭದಲ್ಲಿ ಚಾಲಕ ಮಾವಿನಕುಂಟೆ ಗ್ರಾಮದಲ್ಲಿ ಸಾಮಾನ್ಯ ಜನರಂತೆ ಓಡಾಡಿಕೊಂಡಿದ್ದ. ಇದೀಗ ಈತನ ಸಂಪರ್ಕದಲ್ಲಿದ್ದ ಆತನ ಕುಟುಂಬದ 5 ಮಂದಿಯನ್ನು ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 17 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಒಟ್ಟಾರೆ ಚಾಲಕನ ಟ್ರಾವೆಲ್ ಹಿಸ್ಟರ್ ನಿಗೂಢವಾಗಿದ್ದು, ಜನರಲ್ಲಿ ಇನ್ನಷ್ಟು ಆತಂಕ ಮೂಡಿಸಿದೆ.
ಕೋವಿಡ್-19 ಸೋಂಕು ವರದಿ ದೃಢಪಡಿಸಿಕೊಳ್ಳಲು ಇನ್ನು ಮುಂದೆ ಬೆಂಗಳೂರಿನ ಲ್ಯಾಬೊರೋಟರಿಯನ್ನು ಆಶ್ರಯಿಸಬೇಕಿಲ್ಲ. ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿಯೇ ವರದಿ ಲಭ್ಯವಾಗಲಿದ್ದು, 'ಕೋವಿಡ್-19 ಟೆಸ್ಟಿಂಗ್ ಲ್ಯಾಬೋರೇಟರಿ' ಶುಕ್ರವಾರದಿಂದ ಕೆಲಸ ಆರಂಭಿಸಲಿದೆ.
ಮೈಕ್ರೋ ಬಯಾಲಜಿಸ್ಟ್ ಮತ್ತು ಟೆಕ್ನಿಷಿಯನ್ಗಳು ಕೋವಿಡ್-19 ವರದಿಗಳ 'ಟೆಸ್ಟ್ ರನ್' ಮಾಡುತ್ತಿದ್ದಾರೆ. ಮೂರು ದಿನಗಳಿಂದ ನಿರಂತರವಾಗಿ ವೈದ್ಯಕೀಯ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಐಸಿಎಂಆರ್ನಿಂದ ಅನುಮೋದನೆಗೊಂಡ ಕೋವಿಡ್-19 ಟೆಸ್ಟಿಂಗ್ ಲ್ಯಾಬೋರೇಟರಿಯಲ್ಲಿ ಸರ್ಕಾರದ ಅನುದಾನದಲ್ಲಿ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ ಇದುವರೆಗೂ 8900 ಮಂದಿಯ ಗಂಟಲು ದ್ರವದ ಮಾದರಿ ಮಾದರಿಗಳನ್ನು ತೆಗೆದು ಟೆಸ್ಟ್ಗೆ ಕಳುಹಿಸಲಾಗಿದೆ. ಅದರಲ್ಲಿ 8040 ಮಂದಿ ವರದಿಗಳು ನೆಗೆಟಿವ್ ಬಂದಿವೆ.
ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ತುಮಕೂರಿನಲ್ಲಿ ಕೋವಿಡ್-19 ಪಾಸಿಟಿವ್ ವರದಿಗಳು ಕಡಿಮೆ ಇವೆ. ಪಾಸಿಟಿವ್ ಪ್ರಕರಣಗಳು ಇದುವರೆಗೂ ಜಿಲ್ಲೆಯಲ್ಲಿ ಪತ್ತೆಯಾಗಿರುವುದು 27 ಮಾತ್ರ. ಆದರೆ ತುಮಕೂರು ಜಿಲ್ಲೆಯಲ್ಲಿ ಹೆಚ್ಚು ಸ್ಯಾಂಪಲ್ಗಳನ್ನು ತೆಗೆಯಲಾಗುತ್ತಿದೆ. ಹೀಗಾಗಿ ತುಮಕೂರು ಜಿಲ್ಲಾ ಕೇಂದ್ರದಲ್ಲಿಯೇ 'ಕೋವಿಡ್-19 ಟೆಸ್ಟಿಂಗ್ ಲ್ಯಾಬೋರೇಟರಿ' ತೆರೆಯುವ ಸರ್ಕಾರದ ನಿರ್ಧಾರವು ಸಾಕಷ್ಟು ಸಹಕಾರಿಯಾಗಲಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ವೀರಭದ್ರಯ್ಯ 'ಈಟಿವಿ ಭಾರತ'ಕ್ಕೆ ಸ್ಪಷ್ಟಪಡಿಸಿದ್ದಾರೆ.