ತುಮಕೂರು: ಮಹಿಳೆಯೊಬ್ಬರು ಮನೆಯಲ್ಲೇ ಕುಳಿತು ಆನ್ಲೈನ್ ಬ್ಯುಸಿನೆಸ್ ಮಾಡಲು ಹೋಗಿ 25 ಸಾವಿರ ರೂ. ಕಳೆದುಕೊಂಡಿದ್ದಾರೆ.
ಫೆಬ್ರವರಿ 8ರಂದು ತುಮಕೂರಿನ ಕಲ್ಪತರು ನಗರದ ದೀಪ ಎಂಬ ಮಹಿಳೆ ಮೊಬೈಲ್ನಲ್ಲಿ ಆನ್ಲೈನ್ ಬ್ಯುಸಿನೆಸ್ ಆಫರ್ ಎಂದು ಹುಡುಕಿದ್ದಾರೆ. ಸ್ವಲ್ಪ ಸಮಯದಲ್ಲೇ ದೀಪಾ ಅವರ ಮೊಬೈಲ್ಗೆ ಅಪರಿಚಿತ ವ್ಯಕ್ತಿಯೊಬ್ಬ ಟಾರ್ಗೆಟ್ ಡೀಲ್ ಕಂಪನಿಯಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿ, ಬ್ಯುಸಿನೆಸ್ ಮಾಡಲು 50 ಸಾವಿರ ರೂ. ಕಟ್ಟಬೇಕೆಂದು ತಿಳಿಸಿದ್ದಾನೆ. ಅಲ್ಲದೇ ಹೆಚ್ಡಿಎಫ್ಸಿ ಬ್ಯಾಂಕ್ ಖಾತೆ ನಂಬರ್ ನೀಡಿ ಅದಕ್ಕೆ ಹಣ ವರ್ಗಾವಣೆ ಮಾಡುವಂತೆಯೂ ತಿಳಿಸಿದ್ದಾನೆ.
ಅದರಂತೆ ದೀಪಾ ಫೆ.23ರಿಂದ ಜೂ.24ರವರೆಗೆ ಹಂತ ಹಂತವಾಗಿ 15 ಹಾಗೂ 10 ಸಾವಿರ ರೂ. ಅವರ ಖಾತೆಗೆ ಒಟ್ಟು 25 ಸಾವಿರ ರೂ. ವರ್ಗಾಯಿಸಿದ್ದಾರೆ. ನಂತರ ದಿನಗಳಲ್ಲಿ ಅಪರಿಚಿತ ವ್ಯಕ್ತಿ ಕರೆ ಸ್ವಿಕರಿಸುತ್ತಿಲ್ಲ. ಆದ್ದರಿಂದ ನನಗೆ ಮೋಸ ಮಾಡಿದವರನ್ನು ಪತ್ತೆ ಮಾಡಿ, ನನ್ನ ಹಣ ವಾಪಸ್ ಕೊಡಿಸಬೇಕೆಂದು ಸಿಇಎನ್ ಪೊಲೀಸ್ ಠಾಣೆಗೆ ಮಹಿಳೆ ದೂರು ನೀಡಿದ್ದಾರೆ.
ಎಟಿಎಂ ಲಾಕ್ ನೆಪ ಹೇಳಿ ಒಟಿಪಿ ಪಡೆದು ಹಣ ಡ್ರಾ ಮಾಡಿದ್ರು..
ನಿಮ್ಮ ಎಟಿಎಂ ಕಾರ್ಡ್ ಲಾಕ್ ಆಗಿದೆ ಎಂದು ಹೇಳಿ ಎಟಿಎಂ ಕಾರ್ಡ್ನ ನಂಬರ್ ಮತ್ತು ಒಟಿಪಿ ಪಡೆದು ವ್ಯಕ್ತಿಯೊಬ್ಬರ ಎಸ್ಬಿಐ ಬ್ಯಾಂಕ್ ಖಾತೆಯಿಂದ 23,300ರೂ.ಗಳನ್ನು ವರ್ಗಾಯಿಸಿಕೊಂಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಚಿಕ್ಕಣ್ಣ ಎಂಬುವವರೇ ಹಣ ಕಳೆದುಕೊಂಡವರು. ಜೂ.19ರಂದು ಸಂಜೆ 5:33ಕ್ಕೆ ನನ್ನ ಮೊಬೈಲ್ ನಂಬರ್ಗೆ ಕರೆ ಮಾಡಿ ನಾವು ಬ್ಯಾಂಕ್‌ನವರು ಎಂದು ಎಟಿಎಂ ಮಾಹಿತಿ ಪಡೆದು ವಂಚಿಸಿದ್ದಾರೆ ಎಂದು ಚಿಕ್ಕಣ್ಣ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.