ತುಮಕೂರು: ಸ್ವಚ್ಛ ಭಾರತ್ ಯೋಜನೆ, ಸ್ಮಾರ್ಟ್ ಸಿಟಿ ಕಾಮಗಾರಿಗಳು ಯಾವುದೇ ಅಭಿವೃದ್ಧಿ ಕಾಣದೆ ಅನೈರ್ಮಲ್ಯತೆಯಿಂದ ತುಮಕೂರು ನಗರ ಅನಾರೋಗ್ಯದ ಕಡೆ ಸಾಗುತ್ತಿದೆ. ಅಧಿಕಾರಿಗಳು ಏನು ಮಾಡುತ್ತಿದ್ದೀರಾ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಾಲಿನಿ ರಜನೀಶ್ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಯಾವ ಯೋಜನೆಯೂ ಪೂರ್ಣಗೊಂಡಿಲ್ಲ. ಸ್ಮಾರ್ಟ್ ಸಿಟಿ ಎಂದು ವರ್ಷದಿಂದ ಹೇಳುತ್ತಲೇ ಇದ್ದೇವೆ. ಯಾವುದೇ ಸ್ವಚ್ಛತೆಯನ್ನು ನಗರದಲ್ಲಿ ಕಾಣಲು ಸಾಧ್ಯವಾಗುತ್ತಿಲ್ಲ ಎಂದರು.
ಚರಂಡಿಗಳಲ್ಲಿರುವ ತ್ಯಾಜ್ಯಗಳು ರಸ್ತೆಯ ಮೇಲೆ ಬರುತ್ತಿವೆ ಎಂದರೆ ನಗರ ಎಷ್ಟು ಹಾಳಾಗಿದೆ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ. ಅಧಿಕಾರಿಗಳು ಏನು ಸಮಸ್ಯೆ ಎಂಬುದನ್ನು ತಿಳಿಸಿದರೆ ಅದನ್ನು ಬಗೆಹರಿಸೋಣ. ಆ ಮೂಲಕ ಸ್ವಚ್ಛ ಭಾರತ ಯೋಜನೆಯಡಿ ತುಮಕೂರು ನಗರವನ್ನು ಸ್ವಚ್ಛವಾಗಿಡೋಣ ಎಂದರು.
ಕಾಮಗಾರಿಗಳು ಚಾಲ್ತಿಯಲ್ಲಿವೆ ಎಂದು ಹೇಳುತ್ತೀರಿ. ಆದರೆ ಯಾವುದೇ ಅಭಿವೃದ್ಧಿಯಾಗಿಲ್ಲ. ಚರಂಡಿಯಿಂದ ತೆಗೆದಂತಹ ಗಲೀಜನ್ನು ಅಂದೇ ವಿಲೇವಾರಿ ಮಾಡಿ, ಅಲ್ಲಿಯೇ ಪಕ್ಕದಲ್ಲಿ ಒಣಗಲು ಬಿಟ್ಟರೆ ಅನೈರ್ಮಲ್ಯ ಉಂಟಾಗಿ ಆರೋಗ್ಯ ಕೆಡುತ್ತದೆ. ನೀವೆಲ್ಲರೂ ಎಂಜಿನಿಯರ್ಗಳಾ? ಪದವಿ ಪ್ರಮಾಣಪತ್ರ ಪಡೆದಿದ್ದೀರಿ, ತಿಳಿಯುವುದಿಲ್ಲವೆ. ಆಧುನಿಕ ಯಂತ್ರೋಪಕರಣಗಳನ್ನು ಬಳಸಿಕೊಂಡು ನಗರವನ್ನು ಸ್ವಚ್ಛಗೊಳಿಸಿ ಎಂದು ಅಧಿಕಾರಿಗಳ ವಿರುದ್ಧ ಗುಡುಗಿದರು.
ಒಂದು ವಾರದೊಳಗೆ ನಗರ ಸ್ವಚ್ಛವಾಗಬೇಕು. ರಸ್ತೆ ಪಕ್ಕದಲ್ಲಿ ಬಿದ್ದಿರುವ ಕಸ, ಮಣ್ಣಿನ ಗುಡ್ಡೆಯನ್ನು ಜೆಸಿಬಿ ಮೂಲಕ ತೆರವುಗೊಳಿಸಬೇಕು. ಸ್ಮಾರ್ಟ್ ಸಿಟಿ ಯೋಜನೆ ಅಡಿ ಪ್ರಾರಂಭವಾಗಿರುವ ಬಿಲ್ಡಿಂಗ್, ಪಾಲಿಕೆಯ ಸ್ಮಾರ್ಟ್ ಕಚೇರಿ, ಲೈಬ್ರರಿ, ಗಾಂಧಿ ಮೆಮೋರಿಯಲ್ ಕಟ್ಟಡಗಳ ಕಾಮಗಾರಿ ಶೀಘ್ರದಲ್ಲೇ ಪೂರ್ಣಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.