ತುಮಕೂರು: ಕೊರೊನಾ ಸೋಂಕು ಹರಡುವಿಕೆ ಭೀತಿ ಹಿನ್ನೆಲೆ ಜಿಲ್ಲೆಯ ಬಹುತೇಕ ಪ್ರವಾಸಿ ಕೇಂದ್ರಗಳಿಗೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದ್ದ ಪ್ರವಾಸಿಗರ ಸಂಖ್ಯೆ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ.
ಧಾರ್ಮಿಕ ಕೇಂದ್ರಗಳಾದ ಬಸದಿ ಬೆಟ್ಟ, ಸಿದ್ದಗಂಗಾ ಮಠ, ದೇವರಾಯನದುರ್ಗದ ನರಸಿಂಹಸ್ವಾಮಿ ದೇಗುಲಗಳು, ಯಡಿಯೂರು ಸಿದ್ದಲಿಂಗೇಶ್ವರ ದೇಗುಲ ಸೇರಿದಂತೆ ಬಹುತೇಕ ದೇವಸ್ಥಾನಗಳಿಗೆ ಭಕ್ತರು ಭೇಟಿ ನೀಡಿ ದರ್ಶನ ಪಡೆಯುವ ಪ್ರಕ್ರಿಯೆ ಸಹಜ ಸ್ಥಿತಿಗೆ ಬರುತ್ತಿದೆ.
ಪ್ರವಾಸೋದ್ಯಮ ಇಲಾಖೆಯ ಮಾಹಿತಿ ಪ್ರಕಾರ ತುಮಕೂರು ಜಿಲ್ಲೆಯಲ್ಲಿ ಶೇಕಡಾ 25ರಷ್ಟು ಪ್ರವಾಸೋದ್ಯಮ ಚಟುವಟಿಕೆಗಳು ಸಹಜ ಸ್ಥಿತಿಗೆ ಬಂದಿವೆ. ಮುಖ್ಯವಾಗಿ ಪ್ರವಾಸಿಗರು ಮಾಸ್ಕ್ ಸೇರಿದಂತೆ ಅನೇಕ ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟುವಂತಹ ಸುರಕ್ಷತಾ ಕ್ರಮಗಳನ್ನು ಪಾಲನೆ ಮಾಡುತ್ತಿದ್ದಾರೆ. ಇದು ಅವರಲ್ಲಿ ಸ್ವಯಂಪ್ರೇರಿತರಾಗಿ ಜಾಗೃತಿ ಮೂಡಿ ಬಂದಿದೆ ಎಂಬುದು ಸ್ಪಷ್ಟವಾಗಿದೆ.
ಅಲ್ಲದೆ ಪ್ರವಾಸೋದ್ಯಮವನ್ನೇ ಅವಲಂಬಿಸಿರುವ ವ್ಯಾಪಾರ ವಹಿವಾಟುಗಳು ಕೂಡ ಗರಿಗೆದರಿವೆ. ಈಗಾಗಲೇ ಸಾಕಷ್ಟು ಆರ್ಥಿಕ ಸಂಕಷ್ಟವನ್ನು ಎದುರಿಸಿರುವ ಸಣ್ಣ-ಪುಟ್ಟ ವ್ಯಾಪಾರಸ್ಥರು ನಿಟ್ಟುಸಿರುಬಿಡುವಂತಾಗಿದೆ. ಪ್ರಸ್ತುತ ಇದು ಜಿಲ್ಲೆ ಮಟ್ಟಿಗೆ ಉತ್ತಮ ಬೆಳವಣಿಗೆಯಾಗಿದೆ. ತುಮಕೂರಿನ ಸಿದ್ದಗಂಗಾ ಮಠಕ್ಕೆ ಕೂಡ ಈ ಬಾರಿ ಹೊಸವರ್ಷದಂದು ಸಾಕಷ್ಟು ಮಂದಿ ಭಕ್ತರು ಹಾಗೂ ಪ್ರವಾಸಿಗರು ಭೇಟಿ ನೀಡಿದ್ದಾರೆ. ಅಲ್ಲದೆ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ.