ತುಮಕೂರು: ಆಟೋಗಳನ್ನು ಕದ್ದು ಬಳಿಕ ಅವುಗಳನ್ನು ಬಳಸಿಕೊಂಡು ರಾತ್ರಿ ವೇಳೆ ಅಂಗಡಿಗಳಲ್ಲಿ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ತುಮಕೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಯಲ್ಲಪ್ಪ, ಸುದೀಪ, ರಾಮಯ್ಯ ಬಂಧಿತ ಆರೋಪಿಗಳಾಗಿದ್ದು, ಅವರಿಂದ 4 ಲಕ್ಷ ರೂ. ಮೌಲ್ಯದ ಹಣ ಹಾಗೂ ವಾಹನ(ಆಟೋ) ವಶಕ್ಕೆ ಪಡೆದುಕೊಂಡಿದ್ದಾರೆ.
2020ರ ನವೆಂಬರ್ 20ರಂದು ರಾತ್ರಿ ಯಲ್ಲಾಪುರ ಗ್ರಾಮದ ಯಲ್ಲಾಪುರ ವರ್ತಕರ ಸೌಹಾರ್ದ ಪತ್ತಿನ ಸಹಕಾರ ಸಂಘಕ್ಕೆ ಸೇರಿದ 3,20,087 ರೂ. ಗಳನ್ನು ಮಾತೃಶ್ರೀ ಮೆಡಿಕಲ್ ಸ್ಟೋರ್ನಲ್ಲಿ ಇರಿಸಲಾಗಿತ್ತು. ಆರೋಪಿಗಳು ಮೆಡಿಕಲ್ ಸ್ಟೋರ್ ಬಾಗಿಲು ಒಡೆದು ಹಣವನ್ನು ದೋಚಿದ್ದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸದ್ಯ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ವಿಚಾರಣೆ ವೇಳೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣಗಳು ಮತ್ತು ತುಮಕೂರು ನಗರ ಠಾಣೆಯ ಒಂದು ಪ್ರಕರಣದಡಿ ಆರೋಪಿಗಳು ಭಾಗಿಯಾಗಿರುವುದು ತಿಳಿದುಬಂದಿದೆ. ಬಂಧಿತ ಆರೋಪಿಗಳಿಂದ 2,33,820 ರೂ., ಆಟೋ, 2 ಮೊಬೈಲ್ ಫೋನ್ಅನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.