ತುಮಕೂರು: ಗಾಳಿ ಬೀಸುವ ದಿಕ್ಕಿನಲ್ಲಿ ಸಾಗುತ್ತಿದ್ದ ಅಪಾಯಕಾರಿ ಮಿಡತೆಗಳು, ಈಶಾನ್ಯ ದಿಕ್ಕಿಗೆ ಗಾಳಿ ಬೀಸಿದ್ದರಿಂದ ಮಧ್ಯಪ್ರದೇಶದ ಕಡೆ ಸಾಗಿವೆ. ಹೀಗಾಗಿ ಕರ್ನಾಟಕಕ್ಕೆ ಮಿಡತೆಗಳಿಂದ ಯಾವುದೇ ತೊಂದರೆಯಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.
ತುಮಕೂರು ಜಿಲ್ಲೆ ತುರುವೇಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ದಿನಕ್ಕೆ 200 ಕಿ.ಮೀ. ವೇಗದಲ್ಲಿ ಮಿಡತೆಗಳು ಪ್ರಯಾಣಿಸುತ್ತಿದ್ದವು. ಬೀದರ್, ಕಲಬುರಗಿ, ಯಾದಗಿರಿ ಕಡೆ ಮಿಡತೆಗಳು ದಾಳಿ ನಡೆಸುವ ಸಾಧ್ಯತೆ ಇತ್ತು. ಅದನ್ನು ನಿಯಂತ್ರಿಸಲು ಸಕಲ ತಯಾರಿ ನಡೆಸಿದ್ದೆವು. ಅದೃಷ್ಟವಶಾತ್ ಕರ್ನಾಟದ ಕಡೆ ಗಾಳಿ ತಿರುಗಿಲ್ಲ, ಬದಲಾಗಿ ಮಧ್ಯಪ್ರದೇಶದ ಕಡೆ ಹೋಗಿದೆ. ಅಲ್ಲಿಯೂ ಅದನ್ನು ನಿಯಂತ್ರಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಅಪಯಕಾರಿ ಮಿಡತೆಗಳು ದಕ್ಷಿಣ ಆಫ್ರಿಕಾದಿಂದ ಹೊರಟು ಬಲುಚಿಸ್ತಾನ, ಪಾಕಿಸ್ತಾನ, ರಾಜಸ್ಥಾನ, ಮಧ್ಯಪ್ರದೇಶದಿಂದ ಮಹಾರಾಷ್ಟ್ರಕ್ಕೆ ಬಂದು ಕರ್ನಾಟಕದ ಗಡಿ ಭಾಗದ ಬೀದರ್ಗೆ ಬರುವ ಸಾಧ್ಯತೆಯಿತ್ತು ಎಂದರು.
ನಷ್ಟಕ್ಕೆ ಒಳಗಾಗಿರೋ 10ಲಕ್ಷ ಪರಿಹಾರವನ್ನು ರೈತರಿಗೆ ಕೊಡುವ ಕೆಲಸ ಮಾಡಲಾಗುತ್ತಿದೆ. ಕಾರ್ಮಿಕ ವರ್ಗ, ಸಂಕಷ್ಟದಲ್ಲಿ ಸಿಲುಕಿರುವರಿಗೆ ನೆರವು ನೀಡಲಾಗುವುದು. ತೆಂಗು ಬೆಳೆಗಾರರ ನೆರವಿಗೆ ಬರುವ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದರು.
ಕುಣಿಗಲ್ ತಾಲೂಕಿನಲ್ಲಿ ಗೋಕಟ್ಟೆ, ತುರುವೇಕೆರೆ ತಾಲೂಕಿನಲ್ಲಿ ಚೆಕ್ ಡ್ಯಾಂ, ತಿಪಟೂರು, ಅರಸೀಕೆರೆ, ನಾಗಮಂಗಲ ತಾಲೂಕಿಗೆ ಭೇಟಿ ನೀಡಿ ಜಲಾನಯನ ವ್ಯಾಪ್ತಿಯ ಕೆಲಸಗಳನ್ನು ಪರಿಶೀಲಿಸಲಾಗುತ್ತಿದೆ. ಪೂರ್ವ ನಿಯೋಜಿತ ಕಾರ್ಯ ಕ್ರಮವಲ್ಲ ಎಂದು ಸಚಿವ ಬಿ.ಸಿ ಪಾಟೀಲ್ ಹೇಳಿದರು.