ತುಮಕೂರು: ಮಿಂಟೋ ಆಸ್ಪತ್ರೆಯ ವೈದ್ಯರು ಸೇವೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಕರವೇ ಕಾರ್ಯಕರ್ತರು ಆರೋಪಿಸಿದ್ದಾರೆ. ಅಮಾಯಕರು ತಮ್ಮ ಕಣ್ಣುಗಳನ್ನು ಕಳೆದುಕೊಂಡಿದ್ದು, ಈ ನಿರ್ಲಕ್ಷ್ಯ ಧೋರಣೆ ತೋರಿದ ಆಸ್ಪತ್ರೆಯ ವೈದ್ಯರು ಹಾಗೂ ಔಷಧಿ ಸರಬರಾಜುದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು.
ಬೆಂಗಳೂರಿನ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ 22 ಬಡ ರೋಗಿಗಳನ್ನು ಶಾಶ್ವತವಾಗಿ ಕುರುಡರನ್ನಾಗಿಸಿದ ವೈದ್ಯರು, ಸಿಬ್ಬಂದಿ, ಔಷಧಿ ಸರಬರಾಜುದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ಈ ವೇಳೆ ಮಾತನಾಡಿದ ಸಂಘಟನೆಯ ಜಿಲ್ಲಾಧ್ಯಕ್ಷ ಕೆ.ಎನ್. ಮಂಜುನಾಥ ಗೌಡ ಅವರು 22 ಜನರ ಜೀವನದ ಜೊತೆ ಹುಡುಗಾಟವಾಡಿರುವ ವೈದ್ಯರಿಂದ ಈ ಜನರ ಕುಟುಂಬಕ್ಕೆ ಅನ್ಯಾಯವಾಗಿದೆ. ಅವರಿಗೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸುವುದಾಗಿ ಹೇಳಿದ್ರು.
ಅಷ್ಟೇ ಅಲ್ಲದೇ, ಕರವೇ ಸದಸ್ಯರು ವೈದ್ಯರ ಮೇಲೆ ಹಲ್ಲೆ ನಡೆಸಿಲ್ಲ, ಅವರು ಹೇಳಿದ ಮಾತುಗಳನ್ನು ವಿರೋಧಿಸಿದೆವು ಅಷ್ಟೇ. ಇದನ್ನು ಅವರು ಹಲ್ಲೆ ಮಾಡಿದ್ದಾರೆಂದು ನಮ್ಮ ವಿರುದ್ಧ ಸುಳ್ಳು ಆರೋಪ ಮಾಡುವ ಮೂಲಕ ಪ್ರತಿಭಟನೆ ನಡೆಸುತ್ತಿದ್ದಾರೆ. ಇಂತಹವರನ್ನು ಅಮಾನತು ಮಾಡಬೇಕೆಂದು ಇದೇ ವೇಳೆ ಆಗ್ರಹಿಸಿದರು.