ತುಮಕೂರು: ಬಿಜೆಪಿ ಜಿಲ್ಲಾ ಉಸ್ತುವಾರಿ ಸಚಿವ ಜೆ. ಸಿ ಮಾಧುಸ್ವಾಮಿ ಮತ್ತು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುರೇಶ್ ಗೌಡ ನಡುವಿನ ಮುಸುಕಿನ ಗುದ್ದಾಟ ಇದೀಗ ಜಿಲ್ಲೆಯ ಬಿಜೆಪಿ ಪಕ್ಷದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಮಾಜಿ ಶಾಸಕ ಸುರೇಶ್ ಗೌಡ ಅವರು ಅಸ್ತಿತ್ವಕ್ಕಾಗಿ ಸಾಕಷ್ಟು ಕಸರತ್ತು ನಡೆಸುತ್ತಿದ್ದಾರೆ. ಇನ್ನೊಂದೆಡೆ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕ ಡಿ.ಸಿ ಗೌರಿಶಂಕರ್ ಪರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ಕೆಲಸ ಮಾಡುತ್ತಿದ್ದಾರೆ.
ಅಲ್ಲದೇ, ಕ್ಷೇತ್ರದ ವ್ಯಾಪ್ತಿಯಲ್ಲಿ ಈ ಹಿಂದೆ ಜಾರಿಗೆ ಬಂದಿರೋ ಅನೇಕ ನೀರಾವರಿ ಯೋಜನೆಗಳೇ ಅವೈಜ್ಞಾನಿಕವಾದುದು ಎಂದು ಮಾಧುಸ್ವಾಮಿ ಹೇಳಿಕೆ ನೀಡಿರೋದು ಸುರೇಶ್ಗೌಡ ಅವರಿಗೆ ಸಾಕಷ್ಟು ಇರುಸು - ಮುರುಸು ಉಂಟಾಗಿದೆ.
ಅಲ್ಲದೇ, ಅಂದಿನ ಬೃಹತ್ ನೀರಾವರಿ ಖಾತೆ ಸಚಿವರಾಗಿದ್ದ ಬಸವರಾಜ್ ಬೊಮ್ಮಾಯಿ ಅವರೇ ಅನುಮೋದನೆ ನೀಡಿದ್ದ ಅನೇಕ ನೀರಾವರಿ ಯೋಜನೆಗಳು ಅವೈಜ್ಞಾನಿಕವಾದುದು ಎಂದು ಮಾಧುಸ್ವಾಮಿ ಹೇಳಿಕೆ ನೀಡಿದ್ದಾರೆ. ಇದು ಸುರೇಶ್ಗೌಡ ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಇತ್ತೀಚೆಗೆ ನಡೆದ ಕೆಡಿಪಿ ಸಭೆಯಲ್ಲಿ ಮಾಧುಸ್ವಾಮಿ ಅವರು ಸ್ವತಃ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿರೋ ಬಹುಗ್ರಾಮ ಯೋಜನೆ ಅವೈಜ್ಞಾನಿಕವಾದುದು, ಹೇಮಾವತಿ ನೀರು ಹರಿಸಲು ಸಾಧ್ಯವೇ ಇಲ್ಲ. ನೀರಿನ ಸಾಮರ್ಥವೇ ಇಲ್ಲದೆ ಕಾಮಗಾರಿ ಮಾಡಲಾಗಿದೆ. ಹೀಗಾಗಿ, ನೀರು ಹರಿಸಲು ಸಾಧ್ಯವಿಲ್ಲ. ಅಲ್ಲದೇ, ಡಿ.ಸಿ ಗೌರಿಶಂಕರ್ ಅವರ ಪರ ಪರೋಕ್ಷವಾಗಿ ಹೇಳಿಕೆ ನೀಡಿದ್ದರು.
ಹೀಗಾಗಿ, ಇಬ್ಬರು ಬಿಜೆಪಿ ನಾಯಕರ ಮನಸ್ತಾಪ ಇದೀಗ ಬಿಜೆಪಿ ಹೈಕಮಾಂಡ್ ಅಂಗಳ ತಲುಪಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಪಕ್ಷದ ಮೂಲ ಕಾರ್ಯಕರ್ತರಿಗೆ ಜಿಲ್ಲಾ ಉಸ್ತುವಾರಿ ಸಚಿವರ ನಡೆ ಸಾಕಷ್ಟು ಹಿನ್ನಡೆಯಾಗುತ್ತಿದೆ. ವಿರೋಧ ಪಕ್ಷಗಳ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾಧುಸ್ವಾಮಿ ಓಡಾಡಿದ್ರೆ ಜಿಲ್ಲೆಯಲ್ಲಿ ಪಕ್ಷದ ಸಂಘಟನೆ ಹೇಗೆ ಸಾಧ್ಯ? ಎನ್ನುತ್ತಿದ್ದಾರೆ ಬಿ. ಸುರೇಶ್ ಗೌಡ.
ಇನ್ನೊಂದೆಡೆ ಜೆಡಿಎಸ್ ಶಾಸಕ ಡಿ. ಸಿ ಗೌರಿಶಂಕರ್ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಪಕ್ಷ ಗಟ್ಟಿಗೊಳಿಸುತ್ತಿರೋದು, ಸುರೇಶ್ ಗೌಡ ಅವರಿಗೆ ತಮ್ಮ ಅಸ್ತಿತ್ವಕ್ಕೆ ಧಕ್ಕೆಯಾಗುತ್ತಿದೆ ಎಂಬ ಭಯ ಆವರಿಸಿಕೊಂಡಿದೆ. ಅಲ್ಲದೇ, ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಕೂಡ ಗೌರಿಶಂಕರ್ ಅವರ ನೀರಾವರಿ ಯೋಜನೆಗಳಿಗೆ ಸಾಥ್ ನೀಡುತ್ತಿದ್ದು, ಮುಂಬರುವ ಚುನಾವಣೆ ಸಾಕಷ್ಟು ಕಷ್ಟ ಸಾಧ್ಯವಾಗಲಿದೆ ಎಂಬ ಲೆಕ್ಕಾಚಾರ ಸುರೇಶ್ಗೌಡ ಅವರದ್ದಾಗಿದೆ.