ತುಮಕೂರು: ಸುಪ್ರೀಂಕೋರ್ಟ್ ಪೀಠ ಕರ್ನಾಟಕದಲ್ಲಿಯೂ ಸ್ಥಾಪಿಸಬೇಕು. ಏಕೆಂದರೆ, ಪ್ರತಿಬಾರಿಯೂ ದೆಹಲಿಗೆ ಹೋಗಲು ಜನರಿಗೆ ಸಮಸ್ಯೆಯಾಗುತ್ತದೆ. ಜೊತೆಗೆ ಭಾಷೆಯ ತೊಂದರೆಯುಂಟಾಗುತ್ತದೆ. ಇದ್ರ ಜೊತೆಗೆ, ಕೇಂದ್ರ ಸರ್ಕಾರದಡಿ ನಡೆಯುವಂತಹ ಪರೀಕ್ಷೆಗಳನ್ನು ಕನ್ನಡ ಭಾಷೆಯಲ್ಲಿಯೂ ನಡೆಸುವ ಜೊತೆಗೆ ಉದ್ಯೋಗಗಳಲ್ಲಿಯೂ ಮೀಸಲಾತಿಯನ್ನು ಜಾರಿಗೊಳಿಸಬೇಕು ಎಂದು ಸಂಸದ ಜಿ.ಸಿ.ಚಂದ್ರಶೇಖರ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದರ ನಿಧಿಯಿಂದ 80 ಲಕ್ಷ ರೂ ಅನುದಾನವನ್ನು ತುಮಕೂರು ಜಿಲ್ಲೆಯ ಅಭಿವೃದ್ಧಿಗೆ ನೀಡಲಾಗಿದೆ, ಜಿಲ್ಲೆಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ಪರಿಶೀಲನೆ ನಡೆಸಲು ಇಂದು ಇಲ್ಲಿಗೆ ಆಗಮಿಸಿದ್ದೇನೆ ಎಂದರು.
ಕರ್ನಾಟಕದ ಭಾಷೆ ಹಾಗೂ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಸಂಸತ್ತಿನಲ್ಲಿ ದನಿ ಎತ್ತಿದ್ದೇನೆ. ಐಬಿಪಿಎಸ್ ಎಕ್ಸಾಮ್ ಗಳ 2014ರ ಹಿಂದೆ ಇದ್ದಂತಹ ಕಾನೂನನ್ನು ಬದಲಾವಣೆ ಮಾಡಲಾಗಿದೆ. ಈ ಬದಲಾವಣೆಯಿಂದಾಗಿ ಕನ್ನಡಿಗರಿಗೆ ಸಿಗಬೇಕಾದ ಉದ್ಯೋಗಗಳು ಶೇ 80ರಷ್ಟು ಸಿಗದಂತಾಗಿದೆ. ಸಂಸತ್ತಿನಲ್ಲಿ ಈ ಬಗ್ಗೆ ಪ್ರಶ್ನೆ ಮಾಡಿದಾಗ ನಿರ್ಮಲಾ ಸೀತಾರಾಮನ್ ಅವರು ಈ ಕಾನೂನನ್ನು ಬದಲಾವಣೆ ಮಾಡುವುದಾಗಿ ತಿಳಿಸಿದ್ದರು, ಆದರೆ 2014ರ ಹಿಂದೆ ಇದ್ದಂತಹ ಕಾನೂನನ್ನು ಜಾರಿ ಮಾಡಲಿಲ್ಲ. ಇನ್ನು ಕರ್ನಾಟಕದಲ್ಲಿರುವ ಐಐಟಿ ಮತ್ತು ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಕರ್ನಾಟಕದ ವಿದ್ಯಾರ್ಥಿಗಳಿಗೆ ಸೂಕ್ತ ಸೀಟುಗಳು ದೊರೆಯುತ್ತಿಲ್ಲ, ಹಾಗಾಗಿ ಕರ್ನಾಟಕದ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.