ತುಮಕೂರು: ಜಿಲ್ಲೆಯಲ್ಲಿ ಕೃಷಿಗೆ ಸಂಬಂಧಿಸಿದಂತೆ ಗುಡಿಸಲು, ಬಣವೆ, ಬೇಲಿ, ತೋಟಗಳಲ್ಲಿನ ಅಗ್ನಿ ಅವಘಡಗಳು ಹೇರಳವಾಗಿ ಸಂಭವಿಸಿವೆ. ಈ ವರ್ಷದ ಬೇಸಿಗೆ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಅಡಿಕೆ ಮತ್ತು ತೆಂಗಿನ ತೋಟಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದೇ ಹೆಚ್ಚು.
ಜನವರಿ ತಿಂಗಳಿನಿಂದ ಈವರೆಗೆ 150 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಭೂಮಿಯಲ್ಲಿ ಬೆಂಕಿ ಕಾಣಿಸಿಕೊಂಡಿರೋ ಪ್ರಕರಣಗಳು ದಾಖಲಾಗಿದೆ. ಈ ಬಾರಿ ಬೇಸಿಗೆಯಲ್ಲಿ ತುರುವೇಕೆರೆ ತಾಲೂಕಿನ ಸಂಕಲಾಪುರದಲ್ಲಿ ಬಣವೆಗಳಿಗೆ ಒಂದಾದರೊಂದಂತೆ ಬೆಂಕಿ ಹೊತ್ತಿಕೊಂಡು ಸುಮಾರು 10 ಬಣವೆಗಳು ಒಂದೇ ಬಾರಿ ಸುಟ್ಟು ಭಸ್ಮವಾಗಿವೆ. ತೇವಾಂಶ ಇದ್ದ ವೇಳೆಯಲ್ಲಿಯೇ ಬೆಳೆಯನ್ನು ಬಣವೆಗಳಿಗೆ ಹಾಕಲಾಗುತ್ತಿದೆ. ಇದ್ರಿಂದ ಉಷ್ಣಾಂಶ ಹೆಚ್ಚಿ ಬೆಂಕಿ ಹೊತ್ತಿಕೊಳ್ಳುತ್ತಿದೆ.
ಬೆಂಕಿಯಿಂದ ಬಣವೆ ರಕ್ಷಣೆ ಹೇಗೆ?
ಪೂರ್ಣವಾಗಿ ಒಣಗಿಸಿ ಹುಲ್ಲನ್ನು ಬಣವೆಗಳಿಗೆ ಹಾಕಬೇಕು. ಬಣವೆಯ ಎತ್ತರ 6 ಅಡಿಗಿಂತ ಹೆಚ್ಚು ಇರಬಾರದು. 20 ಟನ್ ಹೆಚ್ಚು ಇರದಂತೆ ರೈತರು ನೋಡಿಕೊಳ್ಳಬೇಕು. 20 ಮೀಟರ್ ಅಂತರದಲ್ಲಿ ಬಣವೆಗಳನ್ನು ನಿರ್ಮಿಸಬೇಕು. ಬಣವೆಗಳ ಒಳಗಡೆ ಎರಡು ಕಡೆ ಬಿದಿರನ್ನು ಹಾಕಬೇಕು ಇದ್ರಿಂದ ಬಣವೆಗಳಿಗೆ ಬೆಂಕಿ ಹೊತ್ತಿಕೊಳ್ಳುವುದನ್ನು ತಡೆಗಟ್ಟಬಹುದು ಎನ್ನುತ್ತಾರೆ ಜಿಲ್ಲಾ ಅಗ್ನಿ ಶಾಮಕ ಠಾಣೆ ಜಿಲ್ಲಾ ಅಧಿಕಾರಿ ಮಾಲಿಂಗಪ್ಪ ಲಂಗೋಟಿ.
2018 ರಲ್ಲಿ ಜಿಲ್ಲೆಯಲ್ಲಿ 29 ಗುಡಿಸಲುಗಳು ಸುಟ್ಟು ಭಸ್ಮವಾಗಿದ್ದು ಈ ವರ್ಷ ಜನವರಿಯಿಂದ ಇದುವರೆಗೆ 13 ಗುಡಿಸಲುಗಳು ಬೆಂಕಿಗಾಹುತಿಯಾಗಿವೆ. ಹೋದ ವರ್ಷ 14 ಕಾರ್ಖಾನೆಗಳಿಗೆ ಬೆಂಕಿ ತಗುಲಿದ್ದರೆ ಈ ವರ್ಷ ಈಗಾಗಲೇ 11 ಕಾರ್ಖಾನೆಗಳಿಗೆ ಬೆಂಕಿ ತಗುಲಿದೆ. ಕೃಷಿಗೆ ಸಂಬಂಧಿಸಿದಂತೆ ಈ ವರ್ಷ ಈಗಾಗಲೇ 150 ಕ್ಕೂ ಹೆಚ್ಚು ಅಗ್ನಿ ಆಕಸ್ಮಿಕ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದು ಬಂದಿದೆ.