ತುಮಕೂರು: ಮಾರಣಾಂತಿಕ ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಸಾಮಾಜಿಕ ಅಂತರವೇ ಪ್ರಮುಖವಾದದ್ದು ಎಂಬ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡಿರುವ ಲಾಕ್ಡೌನ್ ನಿಯಮಗಳಿಗೆ ಎಲ್ಲರೂ ಬದ್ಧರಾಗಿರಬೇಕು ಎಂದು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಧುಸ್ವಾಮಿ ಹೇಳಿದ್ದಾರೆ.
ಗುಬ್ಬಿ ಪಟ್ಟಣದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅವರು, ಲಾಕ್ಡೌನ್ ನಿಯಮವನ್ನು ಉಲ್ಲಂಘಿಸುವ ಯಾರೇ ಆಗಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.
ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕು. ನಾವು ಓಡಾಡುವುದರಿಂದ ಏನೂ ಆಗುವುದಿಲ್ಲ ಎಂದು ಸ್ವೇಚ್ಛಾಚಾರದಿಂದ ನಡೆದುಕೊಳ್ಳಬಾರದು. ಇದರಿಂದ ನಾವಷ್ಟೇ ಕೆಡುವುದಿಲ್ಲ, ಬದಲಾಗಿ ದೇಶಕ್ಕೆ ವಿಪತ್ತು ತಂದಂತಾಗುತ್ತದೆ ಎಂದರು.
ಜವಾಬ್ದಾರಿ ಅರಿತು ಎಲ್ಲರೂ ಮನೆಯಲ್ಲಿಯೇ ಇರಬೇಕು. ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಹೊರಗೆ ಬರಬೇಕು. ಅಲ್ಲದೆ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.