ತುಮಕೂರು: ರಾಜ್ಯ ಸರ್ಕಾರ ಭೂ ಸುಧಾರಣಾ ಕಾಯ್ದೆಯನ್ನು ತಿದ್ದುಪಡಿ ಮಾಡುವ ಮೂಲಕ ಉಳ್ಳವರು ಯಾರು ಬೇಕಾದರೂ ಭೂಮಿಯನ್ನು ಕೊಳ್ಳಬಹುದಾದ ಅವಕಾಶವನ್ನು ನೀಡಿದ್ದು, ರೈತರ ಪಾಲಿಗೆ ಕರಾಳ ಶಾಸನವನ್ನು ತರಲು ಮುಂದಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಸುಗ್ರೀವಾಜ್ಞೆಯ ಮೂಲಕ ಎಪಿಎಂಸಿ ತಿದ್ದುಪಡಿ ಕಾಯ್ದೆ ತಂದಿದೆ. ಅದರ ಜೊತೆಗೆ ಕೇಂದ್ರ ಸರ್ಕಾರ ವಿದ್ಯುತ್ ಕಾಯ್ದೆ ತಿದ್ದುಪಡಿಯನ್ನು ಜಾರಿಗೆ ತರುವ ಪ್ರಯತ್ನದಲ್ಲಿದೆ. ರಾಜ್ಯ ಸರ್ಕಾರ ಭೂ ಸುಧಾರಣಾ ಕಾಯ್ದೆಯನ್ನು ತಿದ್ದುಪಡಿ ಮಾಡುವ ಮೂಲಕ ಉಳ್ಳವರು ಯಾರು ಬೇಕಾದರೂ ಭೂಮಿಯನ್ನು ಕೊಳ್ಳಬಹುದಾದ ಅವಕಾಶವನ್ನು ಮಾಡುವ ಮೂಲಕ ರೈತರ ಪಾಲಿಗೆ ಕರಾಳ ಶಾಸನವನ್ನು ತರಲು ಮುಂದಾಗಿದೆ ಎಂದರು.
ಒಂದು ವೇಳೆ ಈ ಶಾಸನ ಜಾರಿಗೆಯಾದರೆ ರೈತರಿಗೆ ಮರಣ ಶಾಸನವಾಗುವ ಜೊತೆಗೆ ಸಾಮಾನ್ಯ ವರ್ಗದ ರೈತರು ಭೂಮಿಯನ್ನು ಕಳೆದುಕೊಳ್ಳುವ ಮೂಲಕ ಭಿಕ್ಷೆ ಬೇಡುವಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ. ಹಾಗಾಗಿ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ರೈತ ವಿರೋಧಿ ಕಾಯ್ದೆಯನ್ನು ಜಾರಿಗೆ ತರಬಾರದು ಎಂದು ಒತ್ತಾಯಿಸಿದರು.
ಬಳಿಕ ಮಾತನಾಡಿದ ಕಾರ್ಯದರ್ಶಿ ಸಿ.ಯತಿರಾಜು, ಕೋವಿಡ್-19 ಪರಿಸ್ಥಿತಿಯ ದುರ್ಲಾಭವನ್ನು ಪಡೆದುಕೊಂಡ ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ಬದುಕನ್ನು ಬೀದಿಗೆ ತಳ್ಳುವಂತಹ ಶಾಸನವನ್ನು ಜಾರಿಗೆ ತರುತ್ತಿದ್ದು, ಈ ಶಾಸನವನ್ನು ಜಾರಿಗೆ ತರಬಾರದು ಎಂದರು.