ತುಮಕೂರು: ನವಜೀವನಕ್ಕೆ ಕಾಲಿಡುವ ವಧು-ವರರು, ಸಂಬಂಧಿಕರು ಮತ್ತು ಸ್ನೇಹಿತರನ್ನು ಆಹ್ವಾನಿಸಲು ವಿಭಿನ್ನ ಹಾಗೂ ವಿಶಿಷ್ಟ ರೀತಿಯಲ್ಲಿ ಮುಂದಾಗುತ್ತಾರೆ. ಇದರಲ್ಲಿ ಲಗ್ನಪತ್ರಿಕೆ ಪ್ರಮುಖವಾಗಿದ್ದು, ನಗರದಲ್ಲೊಬ್ಬರು ನವಜೀವನಕ್ಕೆ ಕಾಲಿಡುತ್ತಿದ್ದು ವಿಶೇಷವಾದ ಲಗ್ನಪತ್ರಿಕೆಯೊಂದನ್ನು ಮುದ್ರಿಸಿದ್ದಾರೆ.
ಟ್ಯಾಕ್ಸ್ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿರುವ ಮಹೇಂದ್ರ ಎಂಬುವರು ಕ್ರೆಡಿಟ್ ಕಾರ್ಡ್ ಮಾದರಿಯಲ್ಲಿ ಲಗ್ನ ಪತ್ರಿಕೆಯನ್ನು ಮುದ್ರಿಸಿ ವಿತರಿಸುತ್ತಿದ್ದಾರೆ. ಸಾಮಾನ್ಯ ಕ್ರೆಡಿಟ್ ಕಾರ್ಡ್ನಲ್ಲಿ ಇರುವಂತಹ ಎಲ್ಲಾ ಮಾಹಿತಿಯನ್ನು ಮದುವೆಗೆ ಸಂಬಂಧಿಸಿದಂತೆ ಪ್ರಿಂಟ್ ಮಾಡಿಸಿದ್ದಾರೆ. ಅದರಲ್ಲಿ NEWLIFE bank ಎಂದು ಒಂದೆಡೆ ಮುದ್ರಿಸಿದ್ದರೆ, ಮದುವೆಯ ದಿನಾಂಕವನ್ನು Valid From ಸ್ಥಳದಲ್ಲಿ ಮುದ್ರಿಸಲಾಗಿದೆ.
ಕ್ರೆಡಿಟ್ ಕಾರ್ಡ್ ಹಿಂಭಾಗದಲ್ಲಿ ಸಾಮಾನ್ಯವಾಗಿರುವಂತೆ ಕೆಲವೊಂದು ಕುತೂಹಲಕಾರಿ ಮಾಹಿತಿಯನ್ನು ಇನ್ವಿಟೇಶನ್ನಲ್ಲಿ ಕಾಣಬಹುದಾಗಿದೆ. ಅದು ಹೀಗಿದೆ... Debit your presence credit your memories... Not valid if you miss the occasion.... ಎಂದಿದೆ. ಇನ್ನು ಆರತಕ್ಷತೆ ದಿನಾಂಕ ಮತ್ತು ಸಮಯ, ಮುಹೂರ್ತ ದಿನಾಂಕ ಮತ್ತು ಸಮಯ ಹಾಗೂ ಸ್ಥಳವನ್ನು ಮುದ್ರಿಸಲಾಗಿದೆ.
ವರ ಮಹೇಂದ್ರ ಅವರು ಹೇಳುವ ಪ್ರಕಾರ, ತಮ್ಮ ಸಂಬಂಧಿಕರು ಮತ್ತು ಸ್ನೇಹಿತರಿಗೆ ಮದುವೆಯ ಲಗ್ನ ಪತ್ರಿಕೆಯನ್ನು ಅವರ ಮುಂದೆ ಇಡುತ್ತಿದ್ದಂತೆ ಇದೇನಿದು ಕ್ರೆಡಿಟ್ ಕಾರ್ಡ್ ಕೊಡುತ್ತಿರುವೆ ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರಂತೆ.