ತುಮಕೂರು: ಐಎಂಎ ಹಗರಣದಲ್ಲಿ ಎಸ್ಐಟಿ ತನಿಖೆ ಸರಿಯಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿದ ಮಾಜಿ ಸಚಿವ ಸೊಗಡು ಶಿವಣ್ಣ ಈ ತನಿಖೆಯನ್ನ ಸಿಬಿಐಗೆ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸರ್ಕಾರ ರಾಜ್ಯದ ಜನರ ಅಭಿವೃದ್ಧಿಯ ಬಗ್ಗೆ ಯಾವುದೇ ಚರ್ಚೆಯನ್ನು ಮಾಡುತ್ತಿಲ್ಲ, ಐ.ಎಂ.ಎ ಹಗರಣ ಬಗ್ಗೆಯೂ ಮಾತನಾಡುತ್ತಿಲ್ಲ. 25ರಿಂದ 30 ಸಾವಿರ ಕೋಟಿ ಲೂಟಿಯಾಗಿ ಸಾರ್ವಜನಿಕರಿಗೆ ಅನ್ಯಾಯವಾಗಿದೆ. ಎಸ್.ಐ.ಟಿ ತನಿಖೆಯಲ್ಲಿ ಲೋಪದೋಷ ಕಂಡುಬಂದಿದ್ದು, ಇದರಲ್ಲಿನ ಹಣ ರಾಜಕಾರಣಿಗಳು ಮತ್ತು ಅಧಿಕಾರಿಗಳ ಪಾಲಾಗಿದೆ, ಹಾಗಾಗಿ ಈ ಹಗರಣವನ್ನು ಸಿ.ಬಿ.ಐಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.
ತುಮಕೂರಿನಲ್ಲಿ ಈಸಿ ಮೈನ್ ಹಗರಣವನ್ನು ಪೊಲೀಸರು ಮುಚ್ಚಿಹಾಕುವ ಸಂಶಯ ಉಂಟಾಗಿದೆ, ಸರ್ಕಾರದಿಂದ ಇಂತಹ ಘಟನೆಗಳು ರಾಜ್ಯದಲ್ಲಿ ನಡೆಯುತ್ತಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯ ಡಿಸಿಸಿ ಬ್ಯಾಂಕ್ ಅಭಿವೃದ್ಧಿಯಾಗುತ್ತಿದೆ ಅದನ್ನು ಹಗರಣ ಎನ್ನುತ್ತಿರುವುದು ಅಸೂಯೆ ಹಾಗೂ ದ್ವೇಷದ ರಾಜಕಾರಣವನ್ನು ತೋರಿಸುತ್ತದೆ ಎಂದು ಇದೇ ವೇಳೆ ತಿಳಿಸಿದರು.
ಸ್ಪೀಕರ್ಗೆ ಮರ್ಯಾದೆ ಇದ್ದರೆ ಇಷ್ಟೊತ್ತಿಗೆ ರಾಜೀನಾಮೆ ನೀಡುತ್ತಿದ್ದರು, ಅತೃಪ್ತ ಶಾಸಕರು ನೀಡಿದಂತಹ ರಾಜೀನಾಮೆಯನ್ನು ಅಂಗೀಕರಿಸಬೇಕಿತ್ತು, ಇವೆರಡನ್ನೂ ಮಾಡದೆ ಹಾಗೆ ಇದ್ದಾರೆ, ಇಗಲಾದರೂ ಸ್ಪೀಕರ್ ಸ್ಥಾನಕ್ಕೆ ಗೌರವ ನೀಡಿ ರಾಜೀನಾಮೆ ನೀಡಲಿ ಎಂದರು.