ತುಮಕೂರು : ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿಗೆ ದಾಖಲಾತಿ ಆರಂಭವಾಗಿದ್ದು, ಇಲಾಖೆ ನಿರೀಕ್ಷೆ ಮಾಡಿದಂತೆ ದ್ವಿತೀಯ ಪಿಯುಸಿಗೆ ದಾಖಲಾತಿ ಆಗಿಲ್ಲ. ಇದುವರೆವಿಗೂ 2 ಸಾವಿರ ವಿದ್ಯಾರ್ಥಿಗಳ ಕೊರತೆ ಕಂಡು ಬರುತ್ತಿದೆ.
ಪ್ರಥಮ ಪಿಯುಸಿಗೆ 22,317 ಮಂದಿ ಹಾಗೂ ದ್ವಿತೀಯ ಪಿಯುಸಿ ಗೆ 20,300 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಕೆಲವೊಂದು ಕಾಲೇಜುಗಳಲ್ಲಿ ದ್ವಿತೀಯ ಪಿಯುಸಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆಯು ನಿರೀಕ್ಷೆಗಿಂತ ಕನಿಷ್ಠ 10 ರಿಂದ 15 ರಷ್ಟು ಕಡಿಮೆಯಾಗಿದೆ. ಕೊರೊನಾ ಭೀತಿಯಿಂದ ಕಾಲೇಜು ಕಡೆ ವಿದ್ಯಾರ್ಥಿಗಳು ಮುಖ ಮಾಡುತ್ತಿಲ್ಲ ಎಂದು ಅಂದಾಜಿಸಲಾಗುತ್ತಿದೆ. ಅಂತಹ ವಿದ್ಯಾರ್ಥಿಗಳ ಸಂಪರ್ಕವನ್ನು ಇರಿಸಿಕೊಂಡಿರುವ ಇಲಾಖೆ ಅವರು ಕಾಲೇಜಿಗೆ ದಾಖಲಾಗುವಂತೆ ಮನವೊಲಿಸುತ್ತಿದೆ. ಇಷ್ಟೆಲ್ಲಾ ಇದ್ದರೂ ಮಕ್ಕಳು ಸ್ಪಂದಿಸುತ್ತಿಲ್ಲದಿರುವುದು ಇಲಾಖೆಗೆ ಅರ್ಥವಾಗದ ವಿಷಯವಾಗಿದೆ.
ಅಲ್ಲದೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಯುಟ್ಯೂಬ್ನಲ್ಲಿ ಅಪ್ಲೋಡ್ ಮಾಡಿರೋ ಪಾಠವನ್ನು ಗಮನಿಸುತ್ತಿರಬಹುದು ಎಂದು ಅಂದಾಜಿಸಲಾಗುತ್ತಿದೆ. ಯಾಕೆಂದ್ರೆ ಸರ್ಕಾರ ಹಾಜರಾತಿ ಕಡ್ಡಾಯ ಮಾಡಿಲ್ಲ, ಅಲ್ಲದೆ ದಾಖಲಾತಿ ದಿನಾಂಕವನ್ನು ವಿಸ್ತರಿಸುತ್ತಲೇ ಬರುತ್ತಿರುವುದು ಸಹ ಗಮನಾರ್ಹವಾದುದು. ಇದೀಗ ದಾಖಲಾತಿಗೆ ಕೊನೆ ದಿನಾಂಕವನ್ನು ಜನವರಿ 9ಕ್ಕೆ ವಿಸ್ತರಣೆ ಮಾಡಲಾಗಿದೆ.
ಇನ್ನೊಂದೆಡೆ ಜಿಲ್ಲೆಯಲ್ಲಿ ಕೋವಿಡ್-19 ಮಾರ್ಗಸೂಚಿಯನ್ವಯ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು 6 ರಿಂದ 9ನೇ ತರಗತಿಗಳಿಗೆ ವಿದ್ಯಾಗಮ ಹಾಗೂ 10ನೇ ಮತ್ತು 12ನೇ ತರಗತಿಗಳನ್ನು ಜನವರಿ 1ರಿಂದ ಪ್ರಾರಂಭ ಮಾಡಲು ಜಿಲ್ಲಾಡಳಿತ ಸಿದ್ದತೆ ಮಾಡಿಕೊಂಡಿದೆ.
ಶಾಲೆ ಪ್ರಾರಂಭಕ್ಕೆ ಮುನ್ನ ಪೋಷಕರ ಸಭೆ ನಡೆಸುವ ಮೂಲಕ ಕೋವಿಡ್-19ರ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ವಿದ್ಯಾರ್ಥಿಗಳು ಶಾಲೆಗೆ ಹಾಜರಾಗುವ ಸಂದರ್ಭದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವ ಬಗ್ಗೆ ಮತ್ತು ಸ್ಯಾನಿಟೈಸ್ ಮಾಡುವ ಬಗ್ಗೆ ಮತ್ತು ಆಗಿಂದಾಗ್ಗೆ ಲಿಕ್ಟಿಡ್ ಸೋಪಿನಲ್ಲಿ ಕೈ ತೊಳೆಯುವ ಬಗ್ಗೆ ಸೂಕ್ತ ಮಾರ್ಗದರ್ಶನವನ್ನು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ತಿಳಿಸಲಾಗುತ್ತಿದೆ.
ವಿದ್ಯಾರ್ಥಿಗಳಲ್ಲಿ ಕೆಮ್ಮು, ನೆಗಡಿ, ಶೀತ, ಜ್ವರದಂತಹ ಲಕ್ಷಣಗಳು ಕಂಡುಬಂದಲ್ಲಿ ಅಂತಹ ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸದೇ ಮುಂಜಾಗ್ರತವಾಗಿ ವೈದ್ಯಕೀಯ ತಪಾಸಣೆ ನಡೆಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.
ತರಗತಿಗೆ ಬರಲು ಇಚ್ಛಿಸದ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿಗಳನ್ನು ಮುಂದುವರೆಸಲು ಸೂಚಿಸಿದ್ದಾರೆ. ಶಾಲೆ ಪ್ರಾರಂಭದ ನಂತರ ತಾಲೂಕು ಹಂತದ ವಿವಿಧ ಅಧಿಕಾರಿಗಳ ತಂಡ ರಚಿಸಿ ಸದರಿ ತಂಡಗಳು ಶಾಲೆಗಳಿಗೆ ಭೇಟಿ ನೀಡಿ ಶಾಲೆಗಳಲ್ಲಿ ಕೋವಿಡ್-19ರ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುತ್ತಿರುವ ಬಗ್ಗೆ ವರದಿ ತರಿಸಿಕೊಳ್ಳುವಂತೆ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಗಳಿಗೆ ತಿಳಿಸಿದ್ದಾರೆ.