ತುಮಕೂರು: ಮುಖ್ಯಮಂತ್ರಿಗಳ ಆದೇಶದಂತೆ ರಾಜ್ಯದ ರೈತರಿಗೆ ಯಾವುದೇ ತೊಂದರೆಯಾಗದ ನಿಟ್ಟಿನಲ್ಲಿ ರಾಜ್ಯದಲ್ಲಿನ ಎಲ್ಲಾ ಎಪಿಎಂಸಿ ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ತುಮಕೂರು ನಗರದ ಅಂತರಸನಹಳ್ಳಿ ಬಳಿ ಇರುವ ತರಕಾರಿ, ಹೂ, ಹಣ್ಣು, ಕೃಷಿ ಮಾರುಕಟ್ಟೆಗೆ ಆಗಮಿಸಿದ ಎಸ್.ಟಿ.ಸೋಮಶೇಖರ್ ರೈತರು, ವ್ಯಾಪಾರಿಗಳ ಸಮಸ್ಯೆಗಳಿಗೆ ಕಿವಿಯಾದರು. ತರಕಾರಿಗಳನ್ನು ಮಾರುಕಟ್ಟೆಗೆ ತೆಗೆದುಕೊಂಡು ಬರಲು ತೊಂದರೆಯಾಗುತ್ತಿದೆಯೇ? ಎಂದು ಕೇಳಿದರು.
ಪ್ರತಿಯೊಂದು ಜಿಲ್ಲೆಯ ಎಪಿಎಂಸಿಗೆ ಭೇಟಿ ನೀಡಿ, ಸ್ವಚ್ಛತೆಯ ಬಗ್ಗೆ ಪರಿಶೀಲನೆ ನಡೆಸಿ, ರೈತರ ಸಮಸ್ಯೆಗಳನ್ನು ಆಲಿಸಿ, ಪರಿಹರಿಸುವ ಕಾರ್ಯ ಮಾಡಲಾಗುತ್ತಿದೆ. ರೈತರು ತರಕಾರಿಗಳನ್ನು ಮಾರುಕಟ್ಟೆಗೆ ತೆಗೆದುಕೊಂಡು ಬರಲು ಪಾಸ್ಗಳನ್ನು ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.
ದುಬಾರಿ ಬೆಲೆಯಲ್ಲಿ ತರಕಾರಿ ಮಾರಾಟ ಮಾಡಬಾರದು ಎಂಬ ನಿಟ್ಟಿನಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ರೈತರಿಗೆ ಮಾಸ್ಕ್ ನೀಡುವುದು, ಶುಚಿತ್ವದ ಬಗ್ಗೆ ತಿಳಿಹೇಳುವ ಕಾರ್ಯ ಮಾಡಲಾಗುತ್ತಿದೆ. ಸಾರ್ವಜನಿಕರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಸಚಿವರು ಇದೇ ವೇಳೆ ಮನವಿ ಮಾಡಿದರು.