ತುಮಕೂರು: ಬಗರ್ ಹುಕುಂ ಸಾಗುವಳಿ ಮತ್ತು ಪೈಕಿ ನಂಬರ್ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ದುಂಡು ಮೇಜಿನ ಸಭೆ ನಗರದ ಕನ್ನಡ ಭವನ ಸುವರ್ಣ ಸಾಹಿತ್ಯ ಸಭಾಂಗಣದಲ್ಲಿ ನಡೆಯಿತು.
ಕರ್ನಾಟಕ ಪ್ರಾಂತ ರೈತ ಸಂಘ, ಬಗರ್ ಹುಕುಂ ಸಾಗುವಳಿದಾರರ ಹೋರಾಟ ಸಮಿತಿ, ವಿವಿಧ ರೈತಪರ ಸಂಘಟನೆಗಳು ಜಂಟಿಯಾಗಿ ಈ ಸಭೆಯನ್ನು ಆಯೋಜಿಸಿತ್ತು. ಈ ವೇಳೆ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಬಯ್ಯಾರೆಡ್ಡಿ ಮಾತನಾಡಿ, ಜಿಲ್ಲೆಯ ಬಡವರು, ರೈತರು ಮತ್ತು ದಲಿತರ ಹೆಸರಿನಲ್ಲಿ ಇರಬೇಕಾದ ಬಗರ್ ಹುಕುಂ ಜಾಗವು ಐಷಾರಾಮಿ ಅಧಿಕಾರಿಗಳ ಕೈಯಲ್ಲಿದೆ. ಎರಡು ಲಕ್ಷ ಎಕರೆ ಭೂಮಿಯನ್ನು ನಾವು ಈಗಲಾದರೂ ಪಡೆದುಕೊಳ್ಳದಿದ್ದರೆ ಮುಂದೆ ಎಂದಿಗೂ ನಾವು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾಗಿ ಆ ಭೂಮಿಯನ್ನು ಬಡವರಿಗೆ, ದಲಿತರಿಗೆ ಮತ್ತು ರೈತರಿಗೆ ಕೊಡಿಸುವ ಕಾರ್ಯ ಆಗಬೇಕು. ಇದಕ್ಕಾಗಿ ಈಗಾಗಲೇ ಅನೇಕ ಹೋರಾಟಗಳು ನಡೆಸಲಾಗಿದೆ. ಈಗ ಮತ್ತೊಂದು ಸುತ್ತಿನ ಹೋರಾಟಕ್ಕೆ ಮುಂದಾಗಿದ್ದೇವೆ. ಇದೇ ತಿಂಗಳ 25 ರಂದು ನಗರದ ರಂಗಯ್ಯನಪಾಳ್ಯದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು. ಮುಂದಿನ ತಿಂಗಳು ಮಂಡನೆಯಾಗುವ ರಾಜ್ಯ ಬಜೆಟ್ನಲ್ಲಿ ರೈತರಿಗೆ ಅನುಕೂಲವಾಗುವಂತೆ ಬಗರ್ ಹುಕುಂ ಸಾಗುವಳಿ ಸಮಸ್ಯೆ ಇತ್ಯರ್ಥಗೊಳಿಸಬೇಕು. ಕನಿಷ್ಠ 30 ಲಕ್ಷ ಪೈಕಿ (ಪಿ) ನಂಬರ್ ಗಳನ್ನು ಕನಿಷ್ಠ 6 ತಿಂಗಳಲ್ಲಿ ತೆಗೆಯಲು ಬೇಕಾದಂತಹ ಯೋಜನೆಯನ್ನು ಈ ಬಜೆಟ್ನಲ್ಲಿ ಮಂಡಿಸಬೇಕು ಎಂದು ಆಗ್ರಹಿಸಿದರು.
ರೈತ ಮುಖಂಡ ಸಿ.ಯತಿರಾಜು ಮಾತನಾಡಿ, ಸರ್ಕಾರದ ನೀತಿಗಳು ರೈತರ ಪರವಾದದಲ್ಲ. ಬೀಜ ಕಾಯಿದೆ, ಭೂ ನೀತಿ, ಕೃಷಿ ನೀತಿ ಸೇರಿದಂತೆ ಎಲ್ಲವೂ ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ರೀತಿಯಲ್ಲಿ ಇವೆ. ಇಂದು ಭೂಮಿಗೆ ಅಪಾರವಾದಂತಹ ಬೆಲೆ ಇದೆ. ಹಾಗಾಗಿ ಹಣ ಉಳ್ಳವರು ಭೂಮಿಯ ಕಬಳಿಸಿಕೊಳ್ಳುವ ಕಾರ್ಯದಲ್ಲಿ ತೊಡಗಿದ್ದಾರೆ. ರೈತರಿಂದ ಭೂಮಿಯನ್ನು ಕಸಿಯುವ ಮೂಲಕ ಭೂಕಬಳಿಕೆ ಅವ್ಯಾಹತವಾಗಿ ನಡೆದಿಯುತ್ತಿದೆ ಎಂದರು.