ತುಮಕೂರು: ಚೀನಾ ದೇಶದಿಂದ ಬರುವ ಬಿತ್ತನೆ ಬೀಜಗಳನ್ನು ರೈತರು ಸ್ವೀಕರಿಸಬಾರದು ಎಂದು ಜಂಟಿ ಕೃಷಿ ನಿರ್ದೇಶಕಿ ರಾಜ ಸುಲೋಚನಾ ಮನವಿ ಮಾಡಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಬೇರೆ ಬೇರೆ ದೇಶಗಳಿಗೆ ಚೀನಾದಿಂದ ಬಿತ್ತನೆ ಬೀಜಗಳನ್ನು ಕಳುಹಿಸಲಾಗುತ್ತಿದೆ. ಈ ಬಿತ್ತನೆ ಬೀಜಗಳು ಕೀಟ ಮತ್ತು ರೋಗಾಣುಗಳಿಂದ ಕೂಡಿದ್ದು, ಅವುಗಳನ್ನು ಬಿತ್ತನೆ ಮಾಡಿದರೆ ಬೆಳೆ ಸಂಪೂರ್ಣ ನಾಶವಾಗುತ್ತದೆ. ಆದ್ದರಿಂದ ಅನಾಮಧೇಯರಿಂದ ಬೀಜಗಳು ಬಂದರೆ ರೈತರು ಸ್ವೀಕರಿಸಬಾರದು ಎಂದಿದ್ದಾರೆ.
ಈಗಾಗಲೇ ಇಂಗ್ಲೆಂಡ್, ಕೆನಡಾ ದೇಶದ ಅನೇಕ ರೈತರುಗಳಿಗೆ ಇಂತಹ ಬೀಜಗಳನ್ನು ಕಳುಹಿಸಲಾಗಿದೆ. ವಿವಿಧ ತಳಿಗಳ ಬಿತ್ತನೆ ಬೀಜದ ಈ ಪೊಟ್ಟಣಗಳನ್ನು ಯಾರು, ಎಲ್ಲಿಂದ ಕಳುಹಿಸಿರುತ್ತಾರೆ ಎಂಬ ವಿವರ ಇರುವುದಿಲ್ಲ. ಇಂತಹ ಬೀಜದ ಬಳಕೆಯಿಂದ ಕೃಷಿಯ ಮೇಲೆ ವ್ಯತಿರಿಕ್ತ ಪರಿಣಾಮವಾಗಲಿದೆ ಮತ್ತು ಕ್ರಮೇಣವಾಗಿ ಕೃಷಿ ಬಂಜರಾಗುವ ಸಾಧ್ಯತೆ ಇರುತ್ತದೆ ಎಂದು ತಿಳಿಸಿದ್ದಾರೆ.
ಇಂತಹ ಬಿತ್ತನೆ ಬೀಜಗಳ ಪಾರ್ಸೆಲ್ ಬಂದರೆ ರೈತರು ವಾಪಸ್ ಕಳುಹಿಸಬೇಕು. ಒಂದು ವೇಳೆ ಸ್ವೀಕರಿಸಿದರೂ ಪಟ್ಟಣದ ಸಮೇತ ಅದನ್ನು ಸುಟ್ಟು ಹಾಕಬೇಕು ಅಥವಾ ಸಮೀಪದ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಅಥವಾ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಅವರು ತಿಳಿಸಿದ್ದಾರೆ.
ಓದಿ: ಲಾಕ್ಡೌನ್ ಫಜೀತಿ: ಅಂತಿಮ ಕ್ಷಣಗಳಲ್ಲೂ ಸಿಗುತ್ತಿಲ್ಲ ಪುರೋಹಿತರು..ಅವರಿಗಿದೆ ಅವರದ್ದೇ ನೋವು!