ತುಮಕೂರು: ಕೊರೊನಾ ಸೋಂಕು ಹರಡುವಿಕೆ ಭೀತಿಯಿಂದ ಪಾರಾಗಲು ಜನರು ವಿವಿಧ ರೀತಿಯ ಔಷಧೋಪಚಾರಗಳ ಮೊರೆ ಹೋಗುತ್ತಿದ್ದಾರೆ. ಅದರಲ್ಲಿಯೂ ಮುಖ್ಯವಾಗಿ ದೇಹದಲ್ಲಿನ ಆಕ್ಸಿಜನ್ ಸ್ಥಿತಿಗತಿ ಅರಿಯಲು ಎಲೆಕ್ಟ್ರಾನಿಕ್ ಯಂತ್ರಗಳ ಖರೀದಿಗೆ ಮುಂದಾಗುತ್ತಿದ್ದಾರೆ. ಹೀಗಾಗಿ ಪ್ರತಿ ವರ್ಷಕ್ಕಿಂತ ಈ ಬಾರಿ ಅವುಗಳ ಬೆಲೆ ಮಾರುಕಟ್ಟೆಯಲ್ಲಿ ಮೂರು ಪಟ್ಟು ಹೆಚ್ಚಾಗಿರುವುದು ಗಮನಾರ್ಹವಾಗಿದೆ.
ಮನುಷ್ಯನ ದೇಹದಲ್ಲಿನ ಆಕ್ಸಿಜನ್ ಏರಿಳಿತವನ್ನು ಪರೀಕ್ಷಿಸಲು ಬಳಸುವಂತಹ ಪಲ್ಸ್ ಆಕ್ಸಿ ಮೀಟರ್ ಖರೀದಿಸಲು ಜನರು ಮುಗಿ ಬೀಳುತ್ತಿದ್ದಾರೆ. ಕೊರೊನಾ ಎರಡನೇ ಅಲೆ ಸಂದರ್ಭದಲ್ಲಿ ಸೋಂಕಿತರು ಪ್ರತಿ ದಿನ ಪಲ್ಸ್ ಆಕ್ಸಿ ಮೀಟರ್ ಬಳಸಿ ಆಕ್ಸಿಜನ್ ಏರಿಳಿತವನ್ನು ಅರಿಯಬೇಕಿದೆ. ಈ ಮೂಲಕ ತಮ್ಮ ಮುಂದಿನ ಚಿಕಿತ್ಸೆಯ ವಿಧಾನಗಳತ್ತ ಹೆಜ್ಜೆ ಇಡಬೇಕಿದೆ. ಹೀಗಾಗಿ ಸೋಂಕಿತರಿಗೆ ಹಾಗೂ ಬಹುತೇಕ ಸಾರ್ವಜನಿಕರಿಗೆ ಇದು ಸಹಕಾರಿಯಾಗುತ್ತಿದೆ. ಆಕ್ಸಿಜನ್ ಮಟ್ಟವನ್ನು ಅರಿತು ಸೋಂಕಿತರಿಗೆ ಹೆಚ್ಚಿನ ಚಿಕಿತ್ಸೆಗೆ ನಿರ್ಧರಿಸಬಹುದಾಗಿದೆ ಎಂಬುದು ವೈದ್ಯರ ಸಲಹೆ ಕೂಡ ಆಗಿದೆ.
ಜನರ ಬೇಡಿಕೆಗೆ ತಕ್ಕಂತೆ ಮಾರುಕಟ್ಟೆಯಲ್ಲಿ ಪಲ್ಸ್ ಆಕ್ಸಿ ಮೀಟರ್ ಲಭ್ಯವಿದೆ. ಆದರೆ ಮೂರು ಪಟ್ಟು ದರ ಹೆಚ್ಚಾಗಿರುವುದು ಗಮನಾರ್ಹ ಬೆಳವಣಿಗೆಯಾಗಿದೆ. ಕಳೆದ ವರ್ಷ ಕೇವಲ 500 ರಿಂದ 600ರೂ. ಮಾರಾಟವಾಗುತ್ತಿದ್ದ ಪಲ್ಸರ್ ಸಿ ಮೀಟರ್ ಇದೀಗ 3000 ದಿಂದ 3900 ರೂ. ವರೆಗೂ ಮಾರಾಟವಾಗುತ್ತಿವೆ. ಅಲ್ಲದೆ ಜ್ವರದ ಏರಿಳಿತವನ್ನು ಪರೀಕ್ಷಿಸಲು ಬಳಸುವ ಥರ್ಮಾಮೀಟರ್ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ ಎನ್ನುತ್ತಾರೆ ಅಪೋಲೊ ಮೆಡಿಕಲ್ಸ್ ಮ್ಯಾನೇಜರ್ ನಾರಾಯಣ ಸ್ವಾಮಿ.