ತುಮಕೂರು: ತಿಪಟೂರು ತಾಲೂಕಿನಲ್ಲಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳ ಅಡುಗೆ ಸಿಬ್ಬಂದಿ ವರ್ಗದವರನ್ನು ಹಾಗೂ ಅಡುಗೆ ಸಹಾಯಕರನ್ನು ಏಕಾಏಕಿ ಕೆಲಸದಿಂದ ತೆಗೆದಿರುವುದು ಖಂಡಿಸಿ ಮತ್ತೆ ಕೆಲಸ ನೀಡುವಂತೆ ಒತ್ತಾಯಿಸಿ, ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅಡುಗೆ ಸಿಬ್ಬಂದಿ ವರ್ಗದವರು ಮತ್ತು ಸಹಾಯಕರು ಪ್ರತಿಭಟನೆ ನಡೆಸಿದರು.
ತಾಲೂಕಿನಲ್ಲಿ ಸುಮಾರು 12ಕ್ಕೂ ಹೆಚ್ಚು ಹಿಂದುಳಿದ ವರ್ಗಗಳ ಬಾಲಕಿಯರ ಹಾಗೂ ಬಾಲಕರ ವಿದ್ಯಾರ್ಥಿನಿಲಯಗಳಿದ್ದು, ಈ ಹಾಸ್ಟೆಲ್ಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಹಲವು ವರ್ಷಗಳಿಂದ ಅನೇಕ ಸಿಬ್ಬಂದಿ ಕೆಲಸ ಮಾಡುತ್ತಿದ್ದರು. 40ಕ್ಕೂ ಹೆಚ್ಚು ಸಿಬ್ಬಂದಿಗೆ ಕಳೆದ ಮಾರ್ಚ್ ನಿಂದ ಸಂಬಳ ನೀಡದೆ, ಕೆಲಸ ಮಾಡಿಸಿಕೊಂಡಿದ್ದಾರೆ. ಅಲ್ಲದೇ ಕಳೆದ ತಿಂಗಳಿನಿಂದ ನೀವು ಕೆಲಸಕ್ಕೆ ಬರಬೇಡಿ, ಬಂದರೂ ಕೆಲಸ ಮಾಡಿ, ಊಟ ಮಾಡಿಕೊಂಡು ಹೋಗಿ, ಸಂಬಳ ಕೇಳಬೇಡಿ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಈ ವೇಳೆ ಮಾತನಾಡಿದ ಅಡುಗೆ ಸಿಬ್ಬಂದಿ ಉಮಾದೇವಿ, ಕಳೆದ ನಾಲ್ಕು ವರ್ಷಗಳಿಂದ ಬಿಸಿಎಂ ಹಾಸ್ಟೆಲ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ, ಗಂಡ ಮರಣ ಹೊಂದಿದ್ದು, ಮಕ್ಕಳು ಇಲ್ಲ, ಪೋಷಿಸುವವರು ಯಾರು ಇಲ್ಲ. ಈಗ ಏಕಾಏಕಿ ಕೆಲಸದಿಂದ ತೆಗೆದರೆ ಜೀವನ ನಡೆಸಲು ಸಾಧ್ಯವಾಗುವುದಿಲ್ಲ, ಕಳೆದ ಎಂಟು ತಿಂಗಳಿನಿಂದ ಸಂಬಳವನ್ನು ನೀಡಿಲ್ಲ. ಕೆಲಸಕ್ಕೆ ಬರಬೇಡಿ ಎಂದು ಹೇಳುತ್ತಾರೆ. ಕೆಲಸಕ್ಕೆ ಬಂದರೂ ಕೆಲಸ ಮಾಡಿ ಊಟ ಮಾಡಿಕೊಂಡು ಹೋಗಿ ಸಂಬಳ ನೀಡುವುದಿಲ್ಲ ಎಂದು ಅಧಿಕಾರಿಗಳು ಹೇಳುತಿದ್ದಾರೆ ಎಂದು ಹೇಳಿದರು.