ತುಮಕೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಆರ್ಟಿಸಿ) ಸಿಬ್ಬಂದಿ ಮೂರು ದಿನಗಳ ಮುಷ್ಕರದ ಅವಧಿಯಲ್ಲಿ ತುಮಕೂರು ಜಿಲ್ಲಾ ಘಟಕಕ್ಕೆ 1.55 ಕೋಟಿ ರೂ ನಷ್ಟ ಉಂಟಾಗಿದೆ.
ಇನ್ನೊಂದೆಡೆ ಬಸ್ಗಳ ಸಂಚಾರ ಆರಂಭವಾಗಿದ್ದು ಪರಿಸ್ಥಿತಿ ಸಹಜ ಸ್ಥಿತಿಯಲ್ಲಿದೆ. ಮುಷ್ಕರ ಆರಂಭವಾದ ಡಿಸೆಂಬರ್ 11ರಿಂದ 13ರವರೆಗೆ ಜಿಲ್ಲಾ ಕೇಂದ್ರದಿಂದ ಯಾವುದೇ ಬಸ್ಗಳು ಸಂಚರಿಸಿರಲಿಲ್ಲ. ಈಗಾಗಲೇ ಕೊರೊನಾ ಸೋಂಕು ಹರಡುವಿಕೆ ಭೀತಿ ಹಿನ್ನೆಲೆ ಸಾಕಷ್ಟು ನಷ್ಟ ಅನುಭವಿಸಿದ್ದು, ಕೆಎಸ್ಆರ್ಟಿಸಿ ಕೆಲ ದಿನಗಳ ನಂತರ ಚೇತರಿಸಿಕೊಳ್ಳುತ್ತಿತ್ತು. ಅಲ್ಲದೇ ನಿತ್ಯ ಸುಮಾರು ಐವತ್ತು ಲಕ್ಷದವರೆಗೂ ಆದಾಯ ಗಳಿಸುತ್ತಿತ್ತು. 4 ದಿನ ನಿರಂತರವಾಗಿ ನಡೆದ ಸಿಬ್ಬಂದಿ ಮುಷ್ಕರದ ಹಿನ್ನೆಲೆ ಸಂಸ್ಥೆ ಆರ್ಥಿಕ ನಷ್ಟವನ್ನು ಅನುಭವಿಸುವಂತಾಗಿದೆ.
ಲಾಕ್ಡೌನ್ ಅವಧಿಯಲ್ಲಿ ತುಮಕೂರು ಜಿಲ್ಲಾ ಕೆಎಸ್ಆರ್ಟಿಸಿ ಘಟಕಕ್ಕೆ ಬರೋಬ್ಬರಿ 36 ಕೋಟಿ ರೂ. ನಷ್ಟ ಉಂಟಾಗಿತ್ತು. ಲಾಕ್ಡೌನ್ ತೆರವಾದ ನಂತರ ಹಂತಹಂತವಾಗಿ ಘಟಕವು ಆದಾಯ ಗಳಿಸುವತ್ತ ಹೆಜ್ಜೆ ಇರಿಸಿತ್ತು. ಇದೀಗ ದಿಢೀರ್ ಸಿಬ್ಬಂದಿ ಮೂರು ದಿನಗಳ ಕಾಲ ಮುಷ್ಕರ ನಡೆಸಿದ ಪರಿಣಾಮ ನಷ್ಟದ ಪ್ರಮಾಣ ಮತ್ತಷ್ಟು ಹೆಚ್ಚಾಗಿದೆ.
ಓದಿ : ಕಲಬುರಗಿಯಿಂದ ತಿರುಪತಿಗೆ ವಿಮಾನಯಾನ ಪ್ರಾರಂಭಕ್ಕೆ ಮುಹೂರ್ತ ಫಿಕ್ಸ್
ಮುಷ್ಕರ ಈಗಾಗಲೇ ಸುಖಾಂತ್ಯ ಕಂಡಿರುವ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲಾ ಘಟಕದಿಂದ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಬಸ್ ಗಳ ಸಂಚಾರ ಆರಂಭಿಸಲಾಗಿದೆ.