ತುಮಕೂರು: ಎಷ್ಟೇ ಕಷ್ಟವಾದರೂ ರಾಜ್ಯದ ಎಲ್ಲಾ ನೀರಾವರಿ ಯೋಜನೆಗೆ ಅನುದಾನ ಕೊಡುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ತಿಪಟೂರು ಪಟ್ಟಣದಲ್ಲಿಂದು ಮಿನಿ ವಿಧಾನಸೌಧ, ನಗರಸಭೆ ಕಚೇರಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಕಟ್ಟಡಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆ, ಭದ್ರಾ ಯೋಜನೆ ಶೀಘ್ರ ಪೂರ್ಣಗೊಳ್ಳಲು ಗಮನ ಹರಿಸಿದ್ದೇನೆ. ಏಪ್ರಿಲ್‌ನಿಂದ ಪ್ರತಿ ಜಿಲ್ಲೆಯ ಪ್ರವಾಸ ಮಾಡುತ್ತೇನೆ. ಇಡೀ ದಿನ ಆಯಾ ಜಿಲ್ಲೆಯಲ್ಲಿ ಇದ್ದು ಸಮಸ್ಯೆ ಆಲಿಸುತ್ತೇನೆ ಎಂದರು.
ಹತ್ತಾರು ವರ್ಷಗಳ ನಂತರ ಈ ವರ್ಷ ರೈತರು ಹೆಚ್ಚಿನ ಬೆಳೆ ಬೆಳೆದಿದ್ದಾರೆ. ರೈತರ ಆದಾಯ ದುಪ್ಪಟ್ಟು ಆಗಬೇಕು ಅನ್ನೋದು ಪ್ರಧಾನಿ ಮೋದಿ ಕನಸು. ಅದರಂತೆ ರಾಜ್ಯದಲ್ಲಿ ರೈತರಿಗೆ ಒತ್ತು ಕೊಟ್ಟಿದ್ದೇನೆ ಎಂದರು.
ಕೋವಿಡ್ ಮರುಕಳಿಸ್ತಾ ಇದೆ. ಕೈ ಜೋಡಿಸಿ ಕೇಳ್ತೇನೆ ಮಾಸ್ಕ್ ಕಡ್ಡಾಯವಾಗಿ ಧರಿಸಿ, ಲಸಿಕೆ ತೆಗೆದುಕೊಳ್ಳಿ. ಕೋವಿಡ್ ಗಮನದಲ್ಲಿಟ್ಟುಕೊಂಡು ಒಳ್ಳೆಯ ಬಜೆಟ್ ಮಂಡನೆ ಮಾಡಿದ್ದೇನೆ. ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ಕೊಟ್ಟಿದ್ದೇನೆ ಎಂದರು.
ಕೊರೊನಾ ಸೋಂಕು ಹರಡುವಿಕೆ ಭೀತಿ ಹಿನ್ನೆಲೆ ತಿಪಟೂರಿನ ಕಲ್ಪತರು ಶಾಲೆಯಲ್ಲಿ ಮುಖ್ಯಮಂತ್ರಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಕೇವಲ ಎಂಟು ಮಂದಿಗೆ ಮಾತ್ರ ವೇದಿಕೆಯಲ್ಲಿ ಅವಕಾಶ ಮಾಡಿಕೊಡಲಾಗಿತ್ತು. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂಬ ಕಟ್ಟುನಿಟ್ಟಿನ ನಿಯಮ ಪಾಲನೆ ಮಾಡಲಾಗಿತ್ತು.