ತುಮಕೂರು: ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಂಸದ ಜಿ.ಎಸ್.ಬಸವರಾಜು ಅವರ ಅಧ್ಯಕ್ಷತೆಯಲ್ಲಿ ದಿಶಾ ಸಮಿತಿ ಸಭೆ ನಡೆಸಲಾಯಿತು.
ಕರ್ನಾಟಕ ರಾಜ್ಯದ ರಿಮೋಟ್ ಸೆನ್ಸಿಂಗ್ ಅಪ್ಲಿಕೇಶನ್ ಸೆಂಟರ್ನಿಂದ ಕರ್ನಾಟಕ ಜಿಯೋ ಟ್ಯಾಗಿಂಗ್ ಇಂಫಾರ್ಮೇಷನ್ ಸಿಸ್ಟಮ್ಅನ್ನು ಹೊಸದಾಗಿ ಬಿಡುಗಡೆಗೊಳಿಸಿದ್ದು, ಜಿಲ್ಲೆಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಎಲ್ಲಾ ಮಾಹಿತಿಗಳನ್ನು ಇದರಲ್ಲಿ ಪ್ರಕಟಿಸಬೇಕು ಎಂದು ಸಭೆಯಲ್ಲಿ ತಿಳಿಸಲಾಯಿತು.
ಈ ಅಪ್ಲಿಕೇಶನ್ನಲ್ಲಿ ಜಲಶಕ್ತಿ ಯೋಜನೆ ಮತ್ತು ರಾಜ್ಯದ ಜಲಾಮೃತ ಯೋಜನೆಯಲ್ಲಿ ಪ್ರತಿಯೊಂದು ಗ್ರಾಮ ನಕ್ಷೆಯಲ್ಲಿ ಮ್ಯಾಪ್ ಮಾಡಿ ಆಯಾ ಗ್ರಾಮದಲ್ಲಿನ ಎಲ್ಲಾ ಜಲ ಸಂಗ್ರಹ ಯೋಜನೆಗಳನ್ನು ಗುರುತಿಸುವ ಜೊತೆಗೆ ಎಲ್ಲಾ ಇಲಾಖೆಯ ಮಾಹಿತಿಯನ್ನು ತಿಳಿಸಬೇಕೆಂದು ಸಭೆಯಲ್ಲಿ ಅಧಿಕಾರಿಗಳಿಗೆ ತಿಳಿಸಲಾಯಿತು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಡಾ. ಕೆ.ರಾಕೇಶ್ ಕುಮಾರ್, ಆಯಾ ಇಲಾಖೆಗೆ ಸಂಬಂಧಪಟ್ಟ ಜಿಲ್ಲಾಮಟ್ಟದ ಅಧಿಕಾರಿಗಳು ಇಲಾಖೆಯ ಮಾಹಿತಿ ನೀಡುವ ಜವಾಬ್ದಾರಿ ಹೊಂದಿರುತ್ತಾರೆ. ಪಂಚಾಯಿತಿ ಮಟ್ಟದಲ್ಲಿ ಪಿಡಿಒ ಮತ್ತು ಇಒ ಅಧಿಕಾರಿಗಳ ಜವಾಬ್ದಾರಿಯಾಗಿರುತ್ತದೆ. ಇವರ ಮೇಲುಸ್ತುವಾರಿಯನ್ನು ಜಿಲ್ಲಾ ಪಂಚಾಯಿತಿ ಸಿಇಒ ವಹಿಸಿಕೊಂಡಿರುತ್ತಾರೆ. ಜಿಲ್ಲಾ ಸಚಿವರೇ ಆಗಲಿ ಅಥವಾ ಸಂಸದರಾಗಲಿ ನಮ್ಮ ಜಿಲ್ಲೆಯ ಬಗ್ಗೆ ವರದಿ ನೀಡಬೇಕಾದರೆ ತಪ್ಪು ಮಾಹಿತಿ ರವಾನೆಯಾದರೆ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಜವಾಬ್ದಾರರಾಗಿರುತ್ತಾರೆ ಎಂದು ತಿಳಿಸಿದರು.