ತುಮಕೂರು: ಎಲ್ಲೋ ಒಂದು ಕಡೆ ಮುಸ್ಲಿಂರಿಗೆ ಹಿಂದಿನ ಸರ್ಕಾರದಿಂದ ಆತಂಕ ಇತ್ತು, ಭಯದ ವಾತಾವರಣ ಇತ್ತು. ಈ ಬಾರಿಯ ಚುನಾವಣೆಯಲ್ಲಿ ಅದೆಲ್ಲವನ್ನೂ ಮನಗಂಡು ಕಾಂಗ್ರೆಸ್ ಗೆ ಮತ ಹಾಕಿದ್ದಾರೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ.
ನಗರದಲ್ಲಿಂದು ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಜ್ಯಾತ್ಯತೀತವಾದ ಪಕ್ಚ, ಹಾಗಾಗಿ ಅವರು ನಮ್ಮ ಜೊತೆ ನಿಂತಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನಮ್ಮ ಮೇಲೆ ದೊಡ್ಡ ಜವಾಬ್ದಾರಿ ಇದೆ. ಅಭಿವೃದ್ಧಿ ಜೊತೆಗೆ ಶಾಂತಿ ಕಾಪಾಡಬೇಕಿದೆ ಎಂದು ಸಲಹೆ ನೀಡಿದರು.
ಗೃಹ ಸಚಿವನಾಗಿ ಶಾಂತಿ ಕಾಪಾಡುವ ಕೆಲಸ ಮಾಡುತ್ತೇನೆ. ದ್ವೇಷ ಸಾಧಿಸಲು ಹೋಗೋದಿಲ್ಲ. ರಾಜ್ಯದ ಜನರಿಗೆ ಕಾಂಗ್ರೆಸ್ ಸರ್ಕಾರ ಉತ್ತಮವಾದ ಆಡಳಿತ ನೀಡುವುದು ಶತಸಿದ್ದ. ಒಟ್ಟೊಟ್ಟಿಗೆ ಎಲ್ಲ ಸಮುದಾಯಗಳನ್ನು ಅಭಿವೃದ್ಧಿ ಕಡೆಗೆ ತೆಗೆದುಕೊಂಡು ಹೋಗುತ್ತೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಭಾರತ ಶಾಂತಿ ನಂಬಿದ ದೇಶ: ಭಾರತ ಶಾಂತಿಯನ್ನು ನಂಬಿದ ದೇಶ, ಸಂವಿಧಾನದಲ್ಲೇ ಅದನ್ನು ಅಳವಡಿಸಿಕೊಂಡಿದ್ದೇವೆ. ಶಾಂತಿ ಸಮಾಧಾನ ತಾಳ್ಮೆ ಭಾರತದಲ್ಲಿ ಒಂದು ಭಾಗವಾಗಿದೆ. ಅವುಗಳನ್ನು ಕಾಪಾಡಿಕೊಂಡು ಹೋಗಬೇಕಾಗುತ್ತದೆ. ಸಂವಿಧಾನದಲ್ಲಿ ನಾವು ಎಲ್ಲ ಧರ್ಮಗಳನ್ನು ಆಚರಣೆ ಮಾಡಿಕೊಳ್ಳುವದಕ್ಕೆ ಅವಕಾಶ ಕಲ್ಪಿಸಿಕೊಡುತ್ತೇವೆಂದು ಬರೆದುಕೊಂಡಿದ್ದೇವೆ. ಅದೇ ರೀತಿ ಭಾರತ ವಿಭಿನ್ನವಾಗಿ ಇರುವ ದೇಶ. ಐದಾರು ಪ್ರಮುಖ ಧರ್ಮಗಳು ದೇಶದಲ್ಲಿದ್ದು, ನಮ್ಮ ಧರ್ಮದ ಆಚರಣೆಗಳನ್ನು ಆಚರಣೆ ಮಾಡುವ ಮೂಲಕ ಶಾಂತಿ ಕಾಪಾಡೋಣ ಎಂದು ಹೇಳಿದರು.
ಅಕ್ಕಿ ಬದಲು ದುಡ್ಡು : ದುಡ್ಡು ಕೊಡೋದನ್ನು ಕೆಲವರು ಮಾತ್ರ ವಿರೋಧಿಸುತ್ತಾರೆ. ನಾವು ಅಕ್ಕಿ ಕೊಡಲೇಬೇಕು ಎಂದು ತೀರ್ಮಾನ ಮಾಡಿದ್ದೇವೆ. ಕೊಟ್ಟೇ ಕೊಡ್ತಿವಿ, ಅದರಲ್ಲಿ ಎರಡು ಮಾತಿಲ್ಲ. ದುಡ್ಡು ಕೊಟ್ಟರೂ ಕೇಂದ್ರ ಅಕ್ಕಿ ಕೊಡುತ್ತಿಲ್ಲ. ದೇಶದ ಗೋದಾಮಿನಲ್ಲಿ ಅಕ್ಕಿ ಕೊಳೆಯುತ್ತಿದೆ. ರಾಜ್ಯದ ಎಫ್ ಸಿ ಐ ನಲ್ಲಿ 7 ಲಕ್ಷ ಟನ್ ಸ್ಟಾಕ್ ಇದೆ. ಆದರೆ ಖಾಸಗಿ ಅವರಿಗೆ ಮಾರುತ್ತಿದ್ದಾರೆ. ನಮಗೆ ರಾಜಕೀಯ ಕಾರಣಕೋಸ್ಕರ ಕೊಡುತ್ತಿಲ್ಲ. 5 ಕೆಜಿ ಅಕ್ಕಿ ಬದಲಿಗೆ ದುಡ್ಡು ಕೊಡುತ್ತೇವೆ. ಮೂರು ತಿಂಗಳ ಕಾಲ ದುಡ್ಡು ಕೊಡುತ್ತೇವೆ, ಅಷ್ಟರಲ್ಲಿ ಅಕ್ಕಿ ಹೊಂದಿಸುತ್ತೇವೆ ಎಂದು ಸಚಿವ ಪರಮೇಶ್ವರ್ ಭರವಸೆ ನೀಡಿದರು.
10 ಕೆಜಿ ಅಕ್ಕಿಯ ದುಡ್ಡು ಹಾಕಬೇಕು ಎಂದು ಬಿಜೆಪಿ ವಾದ ಕುರಿತು ಪ್ರತಿಕ್ರಿಯೆ: ಬಿಜೆಪಿ ಅವರಿಗೆ ಇದರ ಕುರಿತು ಮಾತನಾಡುವ ನೈತಿಕತೆ ಇಲ್ಲ. ನಾವು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇವೆ. ಅಕ್ಕಿ ಬದಲು ದುಡ್ಡು ಕೊಡಿ ಎಂದು ಬಿಜೆಪಿ ಸಲಹೆ ನೀಡಿದ್ದಕ್ಕೆ, ದುಡ್ಡು ತಿನ್ನೊಕಾಗುತ್ತಾ ಎಂದು ಮಾಜಿ ಸಿಎಂ ಬೊಮ್ಮಾಯಿ ಹೇಳಿದ್ದ ವಿಚಾರ ಕುರಿತು ಮಾತನಾಡಿ, ಇದು ಪ್ರೆಸ್ಟೀಜ್ ವಿಚಾರ ಆಗಬಾರದು, ಬಡವರ ಹಸಿವಿನ ಪ್ರಶ್ನೆಯಾಗಬೇಕು. ಪ್ರೆಸ್ಟೀಜ್ ನಿಂದ ಹೊಟ್ಟೆ ತುಂಬಲ್ಲಾ. ಬಿಜೆಪಿಯವರೇ ಹಣ ಕೊಡಿ ಹಣ ಕೊಡಿ ಎಂದು ಹೇಳಿದ್ರು. ಈಗ ಏಕಾಏಕಿ ಟೀಕೆ ಮಾಡುತ್ತಿದ್ದಾರೆ. ಅವರು ಬಡವರ ಹಸಿವಿನಲ್ಲಿ ರಾಜಕೀಯ ಮಾಡಬಾರದು ಎಂದು ಬಿಜೆಪಿ ಸ್ನೇಹಿತರಲ್ಲಿ ವಿನಂತಿ ಮಾಡುತ್ತೇನೆ ಎಂದು ಪರಮೇಶ್ವರ್ ಹೇಳಿದರು.
ಇದನ್ನೂಓದಿ: ಅಕ್ಕಿ ಲಭ್ಯವಾಗುವವರೆಗೆ ಫಲಾನುಭವಿಗಳ ಖಾತೆಗೆ ಹಣ; ಜುಲೈ 1ರಿಂದ 10 ಕೆಜಿ ಧಾನ್ಯ ವಿತರಣೆ- ಸಿಎಂ ಸಿದ್ದರಾಮಯ್ಯ