ತುಮಕೂರು: ಜಿಲ್ಲೆಯ ಶಿರಾ ತಾಲೂಕಿನಲ್ಲಿ ಇತ್ತೀಚೆಗೆ ಕಾಲೇಜಿಗೆ ಹೋಗುತ್ತಿದ್ದ ವಿದ್ಯಾರ್ಥಿನಿಯನ್ನು ಯುವಕನೊಬ್ಬ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯ ಚಿದಾನಂದ ಭೇಟಿ ನೀಡಿದರು.
ಕೊಲೆ ನಡೆದ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಸ್ನೇಹಿತೆಯರು ಘಟನೆಯನ್ನು ಚಿದಾನಂದಗೆ ವಿವರಿಸಿದರು. ಅನೇಕ ದಿನಗಳಿಂದ ಆರೋಪಿ ಈರಣ್ಣ ಕಾವ್ಯಳಿಗೆ ಕಾಲೇಜಿಗೆ ಹೋಗುವ ಸಂದರ್ಭ ಕಿರುಕುಳ ನೀಡುತ್ತಿದ್ದ. ಅಲ್ಲದೆ ಪುಂಡ ಪೋಕರಿಗಳು ರಸ್ತೆಯಲ್ಲಿ ಓಡಾಡುವ ವೇಳೆ ಕಿರುಕುಳ ನೀಡುವುದು ಸರ್ವೇ ಸಾಮಾನ್ಯವಾಗಿದೆ. ಕಾಲೇಜಿಗೆ ಹೋಗುತ್ತಿದ್ದ ಕಾವ್ಯ ಮೇಲೆ ಹಾಡಹಗಲೇ ಮಚ್ಚಿನಿಂದ ಹಲ್ಲೆ ಮಾಡಿ ಕೊಲೆಗೈದಿರುವ ಈರಣ್ಣನಂತಹ ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸಿರಾ ತಾಲೂಕಿನ ದೊಡ್ಡಗುಳ ಗೊಲ್ಲರಹಟ್ಟಿ ಗ್ರಾಮದಲ್ಲಿ ಕಾಲೇಜು ಯುವತಿಯನ್ನು ಯುವಕ ಕೊಲೆಗೈದಿದ್ದ. ಕಾವ್ಯಳ ಪೋಷಕರಿಗೆ ವಿಧಾನ ಪರಿಷತ್ ಸದಸ್ಯ ಚಿದಾನಂದ ಸಾಂತ್ವನ ಹೇಳಿದರು. ಆರೋಪಿ ಯಾರೇ ಆಗಿದ್ದರು ಶಿಕ್ಷೆ ಕೊಡಿಸಿ ನ್ಯಾಯ ಒದಗಿಸುವ ಭರವಸೆ ನೀಡಿದರು. ಈ ರೀತಿ ಅಮಾಯಕ ಹೆಣ್ಣುಮಕ್ಕಳ ಕೊಲೆ ನಾಗರಿಕ ಸಮಾಜ ತಲೆತಗ್ಗಿಸುವಂತದ್ದು. ಕುಟುಂಬಕ್ಕೆ ನೋವು ಭರಿಸುವ ಶಕ್ತಿ ದೇವರು ನೀಡಲಿ. ಯುವತಿ ಆತ್ಮಕ್ಕೆ ಶಾಂತಿ ಸಿಗುವಂತಾಗಬೇಕು ಎಂದರು.