ತುಮಕೂರು: ರಾಜ್ಯದಲ್ಲಿ ಕೋವಿಡ್ ಆರ್ಭಟ ಜೋರಾಗಿದೆ. ಮೊದ ಮೊದಲು ಹೆಚ್ಚು ವಯಸ್ಸಾದವರಲ್ಲಿ ಕಾಣುತ್ತಿದ್ದ ಈ ಸೋಂಕು ಇದೀಗ ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಕಾಣಿಸಿಕೊಳ್ಳುತ್ತಿದೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಮಕ್ಕಳಿಗೆ ಸೋಂಕು ತಗುಲಿರುವುದು ವರದಿಯಾಗಿದೆ.
ಕೊರೊನಾ ಮೊದಲ ಅಲೆ ಸಂದರ್ಭದಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿಗೆ ಒಳಗಾಗಿರಲಿಲ್ಲ. ವಯೋವೃದ್ಧರೇ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿಗೆ ತುತ್ತಾಗಿದ್ದರು. ಕೋವಿಡ್ ಎರಡನೇ ಅಲೆಯಲ್ಲಿ ಕಳೆದ ಹತ್ತು ದಿನಗಳಿಂದ ತುಮಕೂರು ಜಿಲ್ಲೆಯಲ್ಲಿ 135 ಮಕ್ಕಳು ಸೋಂಕಿಗೆ ಒಳಗಾಗಿದ್ದಾರೆ. ಏಪ್ರಿಲ್ 22ರಂದು 19 ಮಕ್ಕಳು, ಏ. 23ರಂದು 17, ಏ. 24ರಂದು 24, 25ರಂದು 16, ಏಪ್ರಿಲ್ 30ರಂದು 18 ಮಕ್ಕಳು ಸೋಂಕಿಗೆ ಒಳಗಾಗಿದ್ದಾರೆ.
ಮೊದಲ ಅಲೆಯಲ್ಲಿ ಸೋಂಕು ಸಮುದಾಯಕ್ಕೆ ಹರಡುವುದನ್ನು ಬಹುತೇಕ ತಡೆಗಟ್ಟಲಾಗಿದೆ. ಹೀಗಾಗಿ ಮಕ್ಕಳು ಸೋಂಕಿಗೆ ಒಳಗಾಗುವ ಶೇಕಡಾವಾರು ಪ್ರಮಾಣ ಅತಿ ಕಡಿಮೆ ಇತ್ತು. ಆದರೆ ಈ ಬಾರಿ ಜಿಲ್ಲೆಯಲ್ಲಿ ಸಮುದಾಯಕ್ಕೆ ಸೋಂಕು ಹರಡಿರುವುದರಿಂದಾಗಿ ಮಕ್ಕಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ ಎನ್ನುತ್ತಾರೆ ತಜ್ಞರು.
ಇದನ್ನೂ ಓದಿ: ಹೇಗಿದೆ ಕೋಚಿಂಗ್ ಸೆಂಟರ್ಗಳ ಪರಿಸ್ಥಿತಿ: ವಿದ್ಯಾರ್ಥಿಗಳಿಗೆ ಸಿಗಬೇಕಿದೆ ಗುಣಮಟ್ಟದ ತರಬೇತಿ
ಇನ್ನು ಹೆಚ್ಚಿನ ಪ್ರಮಾಣದಲ್ಲಿ ಸೋಂಕಿತ ಮಕ್ಕಳಿಗೆ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆ ಕೂಡ ವಿಶೇಷ ಗಮನ ಹರಿಸಿದೆ. ಮುಖ್ಯವಾಗಿ ಪೋಷಕರೇ ಸೋಂಕಿತ ಮಕ್ಕಳನ್ನು ಆರೈಕೆ ಮಾಡುವಂತೆ ಸಲಹೆ ನೀಡುತ್ತಿದೆ. ಸೋಂಕು ತಗುಲುವ ಪೋಷಕರ ಬಳಿಯೇ ಹೋಮ್ ಐಸೋಲೇಷನ್ ಮೂಲಕ ಚಿಕಿತ್ಸೆ ನೀಡುವುದು ಉತ್ತಮ ಎಂಬ ಅಭಿಪ್ರಾಯಕ್ಕೆ ಆರೋಗ್ಯ ಇಲಾಖೆ ಬಂದಿದೆ. ನಿತ್ಯ ನಿರಂತರವಾಗಿ ವೈದ್ಯಕೀಯ ಸಿಬ್ಬಂದಿ ಮಕ್ಕಳ ಆರೋಗ್ಯದ ಬಗ್ಗೆ ಗಮನ ಹರಿಸುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮೂಲಗಳು ಸ್ಪಷ್ಟಪಡಿಸಿವೆ.