ತುಮಕೂರು : ಬೂದಗವಿ ಅಥವಾ ಸಿದ್ದರಬೆಟ್ಟವು ಪುರಾಣ ಪ್ರಸಿದ್ಧವಾಗಿದೆ. ರಾಮಾಯಣದ ಪ್ರಸಿದ್ಧ ಸಂಜೀವಿನಿ ಪರ್ವತದ ಭಾಗವೆಂದು ನಂಬಲಾಗಿದೆ. ಇಲ್ಲಿ ಈಗಲೂ ಹಲವು ಅಮೂಲ್ಯ ಆಯುರ್ವೇದ ಸಂಬಂಧಿ ಗಿಡಮೂಲಿಕೆಗಳು ದೊರೆಯುತ್ತವೆ. ಗಿಡಮೂಲಿಕೆಗಳ ಸಸ್ಯೋದ್ಯಾನವೊಂದನ್ನು ಸರ್ಕಾರವೇ ಗುರುತಿಸಿದೆ.
ಸಿದ್ಧರಬೆಟ್ಟದ ಕುರಿತು ಅಧ್ಯಯನ ನಡೆಸಿರುವಂತಹ ಕೇಂದ್ರ ಸರ್ಕಾರದ ವಿಶೇಷ ವೈದ್ಯರ ತಂಡ, ಈ ಗಿರಿಶಿಖರ ಒಂದರಲ್ಲೇ 900 ಅಪರೂಪದ ಔಷಧೀಯ ಗುಣ ಹೊಂದಿದ ಸಸ್ಯಗಳಿವೆ ಎಂದು ಘೋಷಿಸಿದೆ.
ಇಲ್ಲಿನ ಐತಿಹ್ಯದಂತೆ ಆನೆಗೆ ಕಟ್ಟಿದ್ದ ಕಬ್ಬಿಣದ ಸರಪಳಿಯು, ಅಮೂಲ್ಯ ಗಿಡದ ಸ್ಪರ್ಶದಿಂದ ಚಿನ್ನವಾದ್ದರಿಂದ ಸುವರ್ಣಗಿರಿ ಎಂದಾಯಿತು. ಈ ಬೆಟ್ಟವು ಅನೇಕ ಗವಿಗಳನ್ನು ಹೊಂದಿದ್ದು ಇಲ್ಲಿ ಅನೇಕ ಯೋಗಿಗಳು ತಪಸ್ಸು ಮಾಡಿ ಸಿದ್ಧಿ ಪಡೆದಿದ್ದರಿಂದ ಸಿದ್ಧರಬೆಟ್ಟ ಎಂದು ಕರೆಯಲ್ಪಡುತ್ತದೆ.
ಈ ಬೆಟ್ಟವನ್ನು ಹತ್ತಿದರೆ ಎಲ್ಲೆಂದರಲ್ಲಿ ಆಯುರ್ವೇದಿಕ ಔಷಧೀಯ ಗುಣಗಳುಳ್ಳ ಮರಗಿಡಗಳು ಕಾಣಸಿಗುತ್ತವೆ. ಸುಮಾರು 6,600 ಅಡಿ ಎತ್ತರದವರೆಗೂ ಬೆಟ್ಟ ಚಾಚಿದೆ. ಶತಮಾನಗಳಿಂದಲೂ ಈ ಸಿದ್ಧರಬೆಟ್ಟ ಹಲವು ಔಷಧೀಯ ಗುಣಗಳ ಸಸ್ಯಗಳನ್ನು ತನ್ನ ಗರ್ಭದಲ್ಲಿ ಹುದುಗಿಸಿಕೊಂಡು ಕಾಪಾಡಿಕೊಂಡಿದೆ.
ಈ ಬೆಟ್ಟ ಸಂಜೀವಿನಿ ಬೆಟ್ಟ ಮತ್ತು ರಸ ಸಿದ್ಧರಬೆಟ್ಟ ಎಂಬ ನಾಮಾಂಕಿತದಿಂದ ಪ್ರಚಲಿತಗೊಂಡಿದೆ. ಈ ಗಿರಿ ಶಿಖರದಲ್ಲಿ ಸಂಜೀವಿನಿ ಕೂಡ ಇದೆ ಎಂಬ ಹಿನ್ನೆಲೆ ಇದನ್ನು ಸಂಜೀವಿನಿ ಬೆಟ್ಟ ಎಂದು ಕರೆಯಲಾಗುತ್ತಿದೆ.
ಈ ಸುದ್ದಿಯನ್ನೂ ಓದಿ: ಲಕ್ಷ್ಮೀ ನರಸಿಂಹಸ್ವಾಮಿ ಜಾತ್ರೆ: ಕೋವಿಡ್ ನಿಯಮ ಪಾಲನೆಗೆ ತುಮಕೂರು ಜಿಲ್ಲಾಡಳಿತ ಸೂಚನೆ
ಕೇಂದ್ರ ಸರ್ಕಾರದ ವಿಶೇಷ ವೈದ್ಯರ ತಂಡ ಇಲ್ಲಿ ಔಷಧೀಯ ಗುಣ ಹೊಂದಿದ ಸಸ್ಯಗಳಿವೆ ಎಂದು ಘೋಷಿಸಿದೆ. ಇನ್ನಷ್ಟು ಔಷಧೀಯ ಗುಣ ಹೊಂದಿದ ಸಸ್ಯಗಳ ಕುರಿತು ನಿರಂತರವಾಗಿ ಅಧ್ಯಯನ ನಡೆಸುತ್ತಿದೆ. ನಿತ್ಯ ಇಲ್ಲಿಗೆ ಬರುವಂತಹ ಭಕ್ತರು ಹಾಗೂ ಕೆಲ ಪಾರಂಪರಿಕ ವೈದ್ಯರು ಇಲ್ಲಿನ ಔಷಧೀಯ ಸಸ್ಯಗಳನ್ನು ತೆಗೆದುಕೊಂಡು ಹೋಗುತ್ತಾರೆ. ಕೆಲ ರೈತರು ತಮ್ಮ ಜಾನುವಾರುಗಳ ಮತ್ತು ಕುರಿ ಮೇಕೆಗಳಿಗೆ ಪೂರಕವಾದಂತಹ ಔಷಧೀಯ ಸಸ್ಯಗಳ ಎಲೆಗಳನ್ನು ಕಿತ್ತುಕೊಂಡು ಹೋಗುತ್ತಾರೆ.