ತುಮಕೂರು: ಎಂಟಿಬಿ ನಾಗರಾಜ್, ಆರ್. ಶಂಕರ್ ಹಾಗೂ ಮುನಿರತ್ನ ಅವರನ್ನು ಸಚಿವರನ್ನಾಗಿ ಮಾಡಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಪ್ರಧಾನಿ ಅನುಮತಿ ನೀಡಿದ್ದಾರೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ತಿಳಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ನಮ್ಮ ಜೊತೆ ಕೈ ಜೋಡಿಸಿದವರಿಗೆ ಸಚಿವ ಸ್ಥಾನ ಕೊಡಲು ನಮ್ಮ ಮುಖ್ಯಮಂತ್ರಿಗಳು ಒಪ್ಪಿಕೊಂಡಿದ್ದಾರೆ. ಜೊತೆಗೆ ರಾಷ್ಟ್ರೀಯ ಅಧ್ಯಕ್ಷರು, ಪ್ರಧಾನ ಮಂತ್ರಿಗಳು ಎಲ್ಲರೂ ಒಪ್ಪಿದ್ದಾರೆ. ಸಚಿವ ಸ್ಥಾನ ಕೊಡಲು ಯಾವುದೇ ಸಮಸ್ಯೆಯಿಲ್ಲ. ಸಚಿವ ಸ್ಥಾನ ನೀಡುವಂತೆ ನಾವೂ ಕೂಡ ಹೇಳಿದ್ದೇವೆ ಎಂದರು.
ಸಂಕ್ರಾಂತಿ ಕಳೆದ ನಂತರ ಸಚಿವ ಸಂಪುಟ ವಿಸ್ತರಣೆಯಾಗುತ್ತದೆ. ಹೆಚ್. ವಿಶ್ವನಾಥ್ ಪ್ರಕರಣ ನ್ಯಾಯಾಲಯದಲ್ಲಿದೆ. ಇದರ ಬಗ್ಗೆ ಮಾತನಾಡಲ್ಲ. ನಾವು ಶಾಸಕರ ಕೈಗೆ 24 ಗಂಟೆ ಸಿಗುತ್ತಿದ್ದೇವೆ. ಯಾವುದೋ ಕೆಲ ಶಾಸಕರಿಗೆ ಕಾರ್ಯಕ್ರಮದ ಒತ್ತಡದಲ್ಲಿ ಸಚಿವರಿಗೆ ಸಿಗದೇ ಇರಬಹುದು. ಆದರೆ ಸಿಎಂ ಎಲ್ಲಾ ಶಾಸಕರನ್ನು ಕರೆದು ಕ್ಷೇತ್ರಗಳ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ. ಈ ವಿಚಾರಕ್ಕೆ ಸಿಎಂಗೆ ಧನ್ಯವಾದ ಹೇಳಬೇಕು. ಅಭಿವೃದ್ಧಿ ಬಗ್ಗೆ ಚರ್ಚೆ ನಡೆದಿದೆ, ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕೆಲಸಗಳಾಗುತ್ತವೆ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ: ಎಲ್ಲಾ ವರ್ಗದ ಜನರಿಗೂ ನ್ಯಾಯಯುತ ಸೌಲಭ್ಯ ಒದಗಿಸಲು ಕೆಲಸ ಮಾಡುವೆ: ಭೈರತಿ ಬಸವರಾಜ್
ಇನ್ನು ಕುರುಬ ಸಮಾಜವನ್ನು ಎಸ್ಟಿ ಸಮುದಾಯಕ್ಕೆ ಸೇರಿಸುವ ಒತ್ತಾಯವಿದೆ. ಕೇಂದ್ರದ ಮುಖಂಡರ ಜೊತೆಗೆ ಮಾತನಾಡಲಾಗಿದೆ. ನಮ್ಮ ಸಮಾಜದ ಹಿರಿಯ ಮುಖಂಡರ ಜೊತೆ ನಾವಿದ್ದೇವೆ. ಸಿದ್ದರಾಮಯ್ಯ ಬೆಂಬಲ ನೀಡಿಲ್ಲ ಎನ್ನುವ ವಿಚಾರ ನೀವು ಅವರನ್ನೇ ಕೇಳಬೇಕು. ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸುವ ವಿಚಾರಕ್ಕೆ ಆರ್ಎಸ್ಎಸ್ ಕೈವಾಡ ಇದೆ ಎನ್ನೋದು ಸತ್ಯಕ್ಕೆ ದೂರವಾದ ಆರೋಪ. ನಾವು ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ ಎಂದರು.