ತುಮಕೂರು: ಪ್ರಸ್ತುತ ಸಮಾಜದಲ್ಲಿ ಸತ್ಯವನ್ನು ಸುಳ್ಳು ಎಂದು ಬಿಂಬಿಸುವುದು. ವಾಸ್ತವವನ್ನು ಪರಿಶೀಲಿಸದೆ ಅದನ್ನೇ ವಿಭಿನ್ನವಾಗಿ ವ್ಯಾಖ್ಯಾನ ಮಾಡಲಾಗುತ್ತಿದೆ ಎಂದು ಉಸ್ತುವಾರಿ ಸಚಿವ ಮಾಧುಸ್ವಾಮಿ ಹೇಳಿದರು.
ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಮಂಡ್ಯ ಕರ್ನಾಟಕ ಸಂಘದ ವತಿಯಿಂದ ನಡೆದ ವೈ.ಕೆ. ರಾಮಯ್ಯ ಕೃಷಿಕ, ಕೃಷಿ ವಿಜ್ಞಾನಿ, ಸಹಜ ಬೇಸಾಯ ವಿಶೇಷ ತಜ್ಞ ಪ್ರಶಸ್ತಿ ಪ್ರದಾನ ಮಾಡಿದ ಬಳಿಕ ಮಾತನಾಡಿದ ಅವರು, ಮಾತುಗಳಿಗೆ ಬೇಕಾದ ಅರ್ಥಗಳನ್ನು ಕಲ್ಪಿಸುವ ವ್ಯವಸ್ಥೆಯಲ್ಲಿ ನಾವಿದ್ದೇವೆ. ಯಾರೋ ಮಾತನಾಡೋ ಮಾತುಗಳಿಗೆ ಅರ್ಥ ಕಲ್ಪಿಸಿ ತೇಜೋವಧೆ ಮಾಡುವ ವ್ಯವಸ್ಥೆಯಲ್ಲಿ ನಾವಿದ್ದೇವೆ. ವಾಸ್ತವ ಅರಿಯುವ, ಸತ್ಯತೆಯನ್ನು ಪರಿಶೀಲಿಸುವ ಪರಿಸ್ಥಿತಿಯಲಿಲ್ಲ. ನಾಯಕರಿಲ್ಲದ ನಾಡಿನಲ್ಲಿ ನಾವು ಬದುಕುತ್ತಿದ್ದೇವೆ. ನಾಯಕರಿಲ್ಲದ ನಾಡಿಗೆ ನಡಿಗೆ ಇರಲ್ಲ. ನಡಿಗೆ ತೋರಿಸಲು ಈ ದಿಕ್ಕಲ್ಲಿ ಹೋಗು ಎಂದು ಹೇಳೋದಕ್ಕೆ ಒಬ್ಬ ನಾಯಕ ಬೇಕು. ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಅಂತಹ ನಾಯಕರೊಬ್ಬರ ಅವಶ್ಯಕತೆ ಇದೆ. ನಾಯಕರನ್ನಾಗಿ ಮಾಡಬೇಕಾದದ್ದು ಜನರು. ಇಂತಹುದೆಲ್ಲಕ್ಕೂ ಪರಿಹಾರ ಕಂಡು ಹಿಡಿಯಲು ಜನಪ್ರತಿನಿಧಿಗಳು ಮುಂದಾಗಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ವೈ.ಕೆ. ರಾಮಯ್ಯ ಕೃಷಿ ವಿಜ್ಞಾನಿ ಪ್ರಶಸ್ತಿಯನ್ನು ಡಾ.ಎಸ್ .ರಾಜೇಂದ್ರ ಪ್ರಸಾದ್, ವೈ.ಕೆ. ರಾಮಯ್ಯ ಸಹಜ ಬೇಸಾಯ ವಿಶೇಷ ತಜ್ಞ ಪ್ರಶಸ್ತಿಯನ್ನು ಹೆಚ್ ಮಂಜುನಾಥ್, ವೈ ಕೆ ರಾಮಯ್ಯ ಕೃಷಿಕ ಪ್ರಶಸ್ತಿಯನ್ನು ಸೋಮಶೇಖರ್ ಹುಲಿಯಾಪುರ ಅವರಿಗೆ ನೀಡಿ ಗೌರವಿಸಲಾಯಿತು.