ತುಮಕೂರು :ಗ್ರಾಮೀಣ ಕ್ರಿಯಾತ್ಮಕ ರಂಗ ತಂಡದಿಂದ ತುಮಕೂರಿನಲ್ಲಿ ಜಾನಪದ ಜಾತ್ರೆ ಹಮ್ಮಿಕೊಳ್ಳಲಾಗಿತ್ತು. ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಯೋಗಾನಂದ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದ ಮೆರವಣಿಗೆಯಲ್ಲಿ ನಂದಿಧ್ವಜ ಕುಣಿತ, ವೀರಗಾಸೆ, ಚಿಟ್ಟಿ ಮೇಳ, ಪೂಜಾ ಕುಣಿತ, ಮಹಿಳಾ ಡೊಳ್ಳುಕುಣಿತ, ಸೋಮನ ಕುಣಿತ ಮುಂತಾದ ಜನಪದ ಕಲಾ ತಂಡಗಳು ಪಾಲ್ಗೊಂಡಿದ್ದವು
ಈ ಸಂದರ್ಭದಲ್ಲಿ ಮಾತನಾಡಿದ ಯೋಗಾನಂದ್, ಹಿಂದಿನ ಕಾಲದ ಕಲೆಗಳನ್ನು ಇಂದಿನ ಸಮಾಜ ಮರೆತು ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಅದರಲ್ಲೂ ಜನಪದ ಕಲೆ ಬಹಳ ವಿಶೇಷವಾದದ್ದು, ಅದರ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಅದನ್ನು ಬೆಳೆಸಿಕೊಂಡು ಹೋಗಲು ಇಂತಹ ಕಾರ್ಯಕ್ರಮಗಳು ಮುಖ್ಯವಾಗಿದ್ದು, ಈ ಜಾನಪದ ಕಲೆಗಳನ್ನು ಪ್ರತಿಯೊಬ್ಬರೂ ಪ್ರೋತ್ಸಾಹಿಸುವ ಕಾರ್ಯ ಮಾಡಬೇಕಿದೆ ಎಂದರು.
ಜನಪರ ಹೋರಾಟಗಾರ ಬಿ. ಉಮೇಶ್ ಮಾತನಾಡಿ, ಕಲೆ ಕೊಲೆಯಾಗುತ್ತಿರುವುದು ಉತ್ತಮ ಬೆಳವಣಿಗೆಯಲ್ಲ, ಕಲೆ ಎಂಬುದು ಜನರ ಬದುಕಿನಲ್ಲಿ ಒಂದಾಗಬೇಕು. ಕಲೆಯಲ್ಲಿ ಕೋಪ, ದುಃಖ, ಸಂತೋಷ ಎಲ್ಲ ರೀತಿಯ ಭಾವನೆಗಳನ್ನು ಕಾಣಬಹುದಾಗಿದೆ. ಇಂದು ಜನಪದ ಕಲೆ ಅಳಿವಿನಂಚಿಗೆ ಹೋಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ಮನುಷ್ಯರು ಇತ್ತೀಚಿನ ದಿನಗಳಲ್ಲಿ ಕೇವಲ ಹಣಕ್ಕಾಗಿ ಬದುಕುತ್ತಿದ್ದಾರೆ. ಅದರ ಬದಲಾಗಿ ಬದುಕಿನ ಪ್ರತಿ ಹಂತದಲ್ಲೂ ಕಲೆಗಾಗಿ ಬದುಕಬೇಕು ಎಂದರು