ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ನೀತಿ ಸಂಹಿತೆ ಜಾರಿಗೆ ಬಂದಾಗಿನಿಂದ ಜಿಲ್ಲೆಯಲ್ಲಿ ಮದ್ಯದ ಓಡಾಟ ಹೆಚ್ಚಾಗಿದೆ. ನೀತಿ ಸಂಹಿತೆ ಜಾರಿಗೆ ಬಂದ 17 ದಿನಗಳಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ 225 ಕೇಸ್ಗಳನ್ನು ಅಬಕಾರಿ ಇಲಾಖೆ ದಾಖಲು ಮಾಡಿದೆ.
ಜಿಲ್ಲೆಯಲ್ಲಿ ಇದುವರೆಗೂ 36.289 ಲೀಟರ್ ಮದ್ಯವನ್ನು ಇಲಾಖೆ ವಶಕ್ಕೆ ಪಡೆದುಕೊಂಡಿದೆ. ಇದರ ಒಟ್ಟು ಮೌಲ್ಯ1 ಕೋಟಿ 65 ಲಕ್ಷ ರೂಪಾಯಿ ಆಗಿದೆ. ಮದ್ಯ ಮಾರಾಟ ಮಾಡುವ ಅನುಮತಿ ಪಡೆದುಕೊಂಡಿರುವ ಮಾರಾಟಗಾರರು, ಪ್ರತಿ ದಿನ ಎಂಎಸ್ಐಎಲ್ನಿಂದ ಎಷ್ಟು ಲೀಟರ್ ಮದ್ಯವನ್ನು ಪಡೆದುಕೊಂಡು ಎಷ್ಟು ಲೀಟರ್ ಮದ್ಯವನ್ನು ಮಾರಾಟ ಮಾಡಿದ್ದಾರೆ ಎಂಬುದರ ಬಗ್ಗೆ ಸರಿಯಾದ ಲೆಕ್ಕವನ್ನು ಕೊಡಬೇಕು. ಹಾಗಾಗಿ ಚುನಾವಣಾ ಆಯೋಗವು ಎಂಎಸ್ಐಎಲ್ನಿಂದ ಸರಬರಾಜು ಆದ ಮದ್ಯದ ಬಗ್ಗೆಯು ಒಂದು ಕಣ್ಣನ್ನು ಇಟ್ಟಿದೆ.
ಹೀಗೆ ಸರಬರಾಜು ಆದ ಮದ್ಯ ಹಾಗೂ ಮಾರಾಟವಾದ ಮದ್ಯದ ಬಗ್ಗೆ ಸರಿಯಾದ ಲೆಕ್ಕ ನೀಡದ ನಗರದ ಪ್ರತಿಷ್ಠಿತ ಕಾಸ್ಮೋ ಕ್ಲಬ್ನ ಮ್ಯಾನೇಜರ್ನನ್ನು ಅರೆಸ್ಟ್ ಮಾಡಲಾಗಿದೆ. ಕಳೆದ ವರ್ಷ ಇದೇ ದಿನ ಎಷ್ಟು ಮದ್ಯ ಮಾರಾಟವಾಗಿತ್ತು ಎಂಬುದರ ಮೇಲೆ ಮದ್ಯದ ಮಾರಾಟದ ಮೇಲೆ ನಿಗಾ ವಹಿಸಲಾಗುತ್ತದೆ.
ಚುನಾವಣೆ ನಡೆಯಲು ಇನ್ನೂ 25 ದಿನ ಬಾಕಿ ಇರುವಾಗಲೇ ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ ಹಾಗೂ ಸರಬರಾಜು ನಡೆಸುತ್ತಿದೆ. ಕಳೆದ ಉಪ ಚುನಾವಣೆಯಲ್ಲಿ 4.500 ಲೀ. ಮದ್ಯ ಖರ್ಚಾಗಿತ್ತು. ಆದ್ರೆ ಈ ಬಾರಿ 36.289 ಲೀ. ಮದ್ಯ ಸೀಜ್ ಆಗಿರುವುದು ನೋಡಿದ್ರೆ, ಇಷ್ಟೊಂದು ಪ್ರಮಾಣದ ಮದ್ಯ ಮಾರಾಟವಾಗಿರುವುದು ಗಮನಕ್ಕೆ ಬರುತ್ತದೆ.
ಇದರಿಂದ ಗ್ರಾಮೀಣ ಭಾಗಗಳಲ್ಲಿ ದ್ವಿ ಕ್ರ ವಾಹನಗಳಲ್ಲಿ ಸಾಗಾಣೆ ಮಾಡುವ ಕುರಿತು ವಿಶೇಷ ಗಮನವನ್ನು ಇಲಾಖೆ ವಹಿಸಿದೆ. ಕಾರಣ ಶೇ. 80 ರಷ್ಟು ಮದ್ಯವನ್ನು ದ್ವಿಚಕ್ರ ವಾಹನದಲ್ಲಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಒಟ್ಟಾರೆ, ಚುನಾವಣೆಯನ್ನು ನ್ಯಾಯ ಸಮ್ಮತವಾಗಿ ನಡೆಸುವ ನಿಟ್ಟಿನಲ್ಲಿ ಆಯೋಗ ಮದ್ಯದ ಮೇಲೆ ವಿಶೇಷವಾದ ಹದ್ದಿನ ಕಣ್ಣನ್ನು ಇಟ್ಟಿದೆ ಎನ್ನುತ್ತಾರೆ ಜಿಲ್ಲಾಧಿಕಾರಿ ಕೆ.ಎ.ದಯಾನಂದ್.