ತುಮಕೂರು: ಪ್ಲಾಸ್ಟಿಕ್ ಮುಕ್ತ ದೇಶಕ್ಕಾಗಿ ಯುವಜನತೆ, ಅಂಗಡಿ ವ್ಯಾಪಾರಿಗಳು, ಸಾರ್ವಜನಿಕರು, ಪ್ಲಾಸ್ಟಿಕ್ ಬಳಕೆ ತ್ಯಜಿಸಿ ಮುಂದಿನ ಪೀಳಿಗೆಗೆ ಪರಿಸರವನ್ನು ಉಳಿಸುವ ಪ್ರಯತ್ನ ಇಂದಿನಿಂದಲೇ ಮಾಡಬೇಕಿದೆಯೆಂದು ಮಾಜಿ ಸಚಿವ ವೆಂಕಟರಮಣಪ್ಪ ತಿಳಿಸಿದರು.
ಪಟ್ಟಣದ ಪುರಸಭೆ ವತಿಯಿಂದ ಇಂದು ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಪ್ಲಾಸ್ಟಿಕ್ ಅಂತಿಮ ಶವಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ವೆಂಕಟರಮಣಪ್ಪ ಅವರು, ಒಮ್ಮೆ ಉಪಯೋಗಿಸಿ ಬಿಸಾಡುವ ಪ್ಲಾಸ್ಟಿಕ್ ಸಾಮಾಗ್ರಿಗಳ ಬಳಕೆಯನ್ನು ಪ್ರತಿಯೊಬ್ಬರೂ ಸಹ ಸ್ವಯಂ ಪ್ರೇರಿತವಾಗಿ ನಿಲ್ಲಿಸಬೇಕೆಂದರು. ಜೊತೆಗೆ, ಪ್ಲಾಸ್ಟಿಕ್ ಬಳಕೆಯಿಂದ ಮಾರಾಣಾಂತಿಕ ರೋಗಗಳು ಹರಡುತ್ತಿವೆ, ಭೂಮಿಯು ಇಂದು ರಾಸಾಯನಿಕಗಳಿಂದ ತುಂಬಿ ವಿಷಕಾರಿಯಾಗಿದೆ. ಕುಡಿಯುವ ನೀರಿನಲ್ಲಿ ಪ್ಲೋರೈಡ್ ಅಂಶ ಹೆಚ್ಚಲೂ ಕೂಡ ಪ್ಲಾಸ್ಟಿಕ್ ಕಾರಣವಾಗಿದೆ. ಹಾಗಾಗಿ ಇಂದಿನಿಂದ ಯಾರು ಪ್ಲಾಸ್ಟಿಕ್ ಬಳಕೆ ಮಾಡಬಾರದು, ಪ್ಲಾಸ್ಟಿಕ್ ಮುಕ್ತ ಪಾವಗಡಕ್ಕೆ ಇಂದಿನಿಂದಲೇ ಪಣ ತೊಡಬೇಕೆಂದರು.
ತಹಶೀಲ್ದಾರ್ ವರದರಾಜು ಮಾತನಾಡಿ, ಪ್ಲಾಸ್ಟಿಕ್ ಮುಕ್ತ ಭಾರತಕ್ಕಾಗಿ ಇಂದಿನಿಂದ ಅಕ್ಟೋಬರ್ 2ರವರೆಗೂ ಪಟ್ಟಣದ ಪ್ರತಿ ವಾರ್ಡ್‍ಗಳಲ್ಲಿನ ಶಾಲಾ ಕಾಲೇಜುಗಳಲ್ಲಿ ಗ್ರಾಪಂ ಮಟ್ಟದಲ್ಲೂ ಕೂಡ ಪ್ಲಾಸ್ಟಿಕ್ ಬಳಕೆ ವಿರುದ್ಧದ ಕಾರ್ಯಕ್ರಮದ ಮೂಲಕ ಅರಿವು ಮೂಡಿಸಬೇಕಿದೆ ಎಂದರು. ಪುರಸಭಾ ಮುಖ್ಯಾಧಿಕಾರಿ ನವೀನ್ ಚಂದ್ರ ಮಾತನಾಡಿ, ಪ್ಲಾಸ್ಟಿಕ್ ಮುಕ್ತ ಪಟ್ಟಣಕ್ಕಾಗಿ ಸಹಕರಿಸಬೇಕು. ನಿಯಮ ಮೀರಿ ಉಪಯೋಗಿಸಿದರೆ ಕಾನೂನು ಕ್ರಮ ತಪ್ಪಿದ್ದಲ್ಲ. ಇದರಿಂದಾಗುವ ಅನಾಹುತಗಳನ್ನು ತಪ್ಪಿಸಿ ಆರೋಗ್ಯಕರ ಪರಿಸರಕ್ಕೆ ಇಂದು ಪ್ಲಾಸ್ಟಿಕ್ ಮುಕ್ತ ಭಾರತ ಅವಶ್ಯ ಎಂದರು.
ಇದೇ ವೇಳೆ ಪ್ಲಾಸ್ಟಿಕ್‍ನಿಂದ ತಯಾರಿಸಲ್ಪಟ್ಟ ಹಲವು ಸಾಮಾಗ್ರಿಗಳನ್ನು ತಳ್ಳುವ ಗಾಡಿಯಲ್ಲಿಟ್ಟು ಅಂತಿಮ ಶವ ಯಾತ್ರೆಯನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಸಲಾಯಿತು.