ತುಮಕೂರು: ಪದವೀಧರ ಕ್ಷೇತ್ರದ ಚುನಾವಣೆಯ ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ನೇಮಕ ಮಾಡುವ ಭರವಸೆಯನ್ನು ಸಿಎಂ ಬಿಎಸ್ವೈ ನೀಡಿದ್ದರು. ಈಗ ಬೇರೆಯವರಿಗೆ ಮಣೆಹಾಕುತಿದ್ದಾರೆ ಎಂದು ಆರೋಪಿಸಿ ಹಾಲನೂರು ಎಸ್. ಲೇಪಾಕ್ಷ ತನ್ನ ಬೆಂಬಲಿಗರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಉದ್ದೇಶಿಸಿ ಲೇಪಾಕ್ಷ ಮಾತನಾಡಿ, ಕಳೆದ ವರ್ಷ ಶಿಕ್ಷಕರ ಕ್ಷೇತ್ರಕ್ಕೆ ಬಿಜೆಪಿ ಪಕ್ಷದಿಂದ ನನ್ನನ್ನು ಅಧಿಕೃತವಾಗಿ ಅಭ್ಯರ್ಥಿಯಾಗಿ ಘೋಷಿಸಲಾಗಿತ್ತು. ನಾಮಪತ್ರ ಸಲ್ಲಿಕೆ ವೇಳೆ ಯಡಿಯೂರಪ್ಪ ಅವರು ಸಂಸದ ಜಿ.ಎಸ್ ಬಸವರಾಜು ಅವರ ಮೂಲಕ ಮನೆಗೆ ಕರೆಸಿ, ಈ ಬಾರಿ ನಾನು ಒತ್ತಡದಲ್ಲಿ ಸಿಲುಕಿದ್ದೇನೆ. ಪದವೀಧರ ಚುನಾವಣೆಯಿಂದ ಹಿಂದೆ ಸರಿಯಬೇಕು. ಮುಂದಿನ ಭಾರಿ ಯಾವುದೇ ಕಾರಣಕ್ಕೂ ನಿನಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಭರವಸೆ ನೀಡಿದ್ದರು. ಈ ಹೇಳಿಕೆಗೆ ಜಿ.ಎಸ್.ಬಸವರಾಜು ಸಾಕ್ಷಿ ಎಂದ ಅವರು ಈಗ ಮೂರು ತಿಂಗಳ ಹಿಂದೆ ಬಿಜೆಪಿ ಸೇರಿದ ವ್ಯಕ್ತಿಯನ್ನು ಅಭ್ಯರ್ಥಿ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.
ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡ ಚಿದಾನಂದಗೌಡ ಕೆಲವು ತಿಂಗಳ ಹಿಂದೆ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಅವರಿಗೆ ಮಣೆ ಹಾಕಲಾಗುತ್ತಿದೆ. ಈ ಅನ್ಯಾಯವನ್ನು ಸರಿಪಡಿಸಬೇಕು. ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಎಂದು ಅಸಮಾಧಾನ ಹೊರಹಾಕಿದರು.
ಈ ಟಿಕೆಟ್ ಕೈತಪ್ಪಿದರೆ ಬಿಜೆಪಿ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಎಚ್ಚರಿಕೆಯನ್ನೂ ರವಾನಿಸಿದರು.