ತುಮಕೂರು:ನಗರದ ಜಿಲ್ಲಾ ಬಾಲಭವನ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಅಂಗನವಾಡಿ ಮಕ್ಕಳಿಗೆ ವೇಷಭೂಷಣ ಸ್ಪರ್ಧೆ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತುಮಕೂರು ಗ್ರಾಮಾಂತರ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಂ ಎಸ್ ಶ್ರೀಧರ್, ಶ್ರೀಕೃಷ್ಣ ಚಿಕ್ಕವಯಸ್ಸಿನಲ್ಲಿ ಮುದ್ದಾಗಿ ಕಾಣುತ್ತಿದ್ದ. ಹಾಗಾಗಿ ಬೆಣ್ಣೆ ಕೃಷ್ಣ ಎಂದು ಕರೆಯುತ್ತೇವೆ. ಅದೇ ರೀತಿ ಈ ಮಕ್ಕಳು ಕಾಣುತ್ತಿದ್ದಾರೆ. ತಾಯಿಗೆ ಮಗುವನ್ನು ಯಾವುದಾದರೂ ಒಂದು ವೇಷ ತೊಡಿಸಿ ಎಂದರೆ ಮೊದಲಿಗೆ ನೆನಪಾಗುವುದು ಕೃಷ್ಣನ ವೇಷ.
ಅದೇ ರೀತಿ ಮಕ್ಕಳು ಬಾಲಕೃಷ್ಣನ ಹಾಗೆ ಕಾಣುತ್ತಿದ್ದಾರೆ. ಮಕ್ಕಳು ಹೀಗೆ ಮುದ್ದಾಗಿ ಕಾಣಲು ತಂದೆ-ತಾಯಂದಿರು ಬಹಳ ಶ್ರಮ ಪಟ್ಟಿರುತ್ತಾರೆ. ಚಿಕ್ಕವಯಸ್ಸಿನಿಂದಲೇ ಮಕ್ಕಳನ್ನು ಇಂತಹ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಬೇಕು ಎಂದರು.